ಈಗ ಬೇಸಿಗೆ ಕಾಲ.  ಬೀದಿ ಬದಿ, ಹೊಲ, ತೋಟ, ಗದ್ದೆ, ರಸ್ತೆ ಬದಿಯಲ್ಲಿರುವ ಹುಣಸೆ ಮರ ಕಂಡರೆ ಸಾಕು, ಕಣ್ಣು ನೇರವಾಗಿ ತಿಳಿ ಹಸಿರು ಬಣ್ಣದ ಹುಣಸೆ ಚಿಗುರಿನ ಮೇಲೆಯೇ ಹೋಗುತ್ತದೆ. ವಯಸ್ಸು ಯಾವುದೇ ಇರಲಿ ಶಕ್ತಿಯನ್ನೆಲ್ಲ ಉಪಯೋಗಿಸಿ, ಹುಣಸೆ ಚಿಗುರು ಕೀಳಲು ಪ್ರತಿಯೊಬ್ಬರು ಹಾತೊರೆಯುವುದು ಸಹಜ.

ವಸಂತ ಋತು ಆರಂಭವಾಗುತ್ತಿದ್ದಂತೆಯೇ ಮರಗಳು ಎಲೆ ಉದುರಿಸಿ, ಎಳೆಯ ಚಿಗುರು ಮತ್ತು ಹೂವನ್ನು ಅರಳಿಸುತ್ತವೆ. ಅದರಲ್ಲೂ ಹುಣಸೆ ಮರದ ಎಳೆ ಚಿಗುರು ಎಲ್ಲರ ಬಾಯಲ್ಲೂ ನೀರೂರಿಸುತ್ತದೆ.

ಬಯಲುಸೀಮೆಯ ಹಳ್ಳಿಗಳ ರೈತರು ತಮ್ಮ ಹೊಲ, ಗದ್ದೆಗಳ ಬದುಗಳಲ್ಲಿ ಹುಣಸೆ ಮರ ಬೆಳೆಯುವುದು ಸಾಮಾನ್ಯ. ಅಲ್ಲದೆ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿರುವ ಹುಣಸೆ ಮರಗಳು ಪ್ರಸ್ತುತ ದಿನಮಾನದಲ್ಲಿ ಚಿಗುರೊಡೆದಿದ್ದು, ಜಿಲ್ಲೆಯ ಜನರು ಅವುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಹುಣಸೆ ಚಿಗುರೆಲೆಯನ್ನು ಬರಿ ಬಾಯಲ್ಲೇ ತಿನ್ನಬಹುದು. ಅದರಲ್ಲಿನ ಹುಳಿ ರುಚಿ ಮತ್ತು ಘಮ ಅದ್ಭುತ ಸಂಗಮ. ಹುಣಸೆ ಮರದ ಚಿಗುರು ಅವಧಿ ಮುಗಿಯುವರೆಗೂ ಬಹುತೇಕ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹುಣಸೆ ಚಿಗುರಿನಿಂದ ತಯಾರಾದ ಅಡುಗೆ ಸಿದ್ದವಾಗುತ್ತದೆ. ಬಯಲುಸೀಮೆ ಚಿತ್ರದುರ್ಗದಲ್ಲಿನ ಬಹಳಷ್ಟು ಮನೆಗಳಲ್ಲಿ ತಯಾರಾಗುವ ಹುಣಸೆ ಚಿಗುರಿನ ಚಟ್ನಿ ಹಾಗೂ ಸಾಂಬಾರು, ಮುದ್ದೆಯೊಂದಿಗೆ ಸವಿದರೆ ಸಿಗುವ ಆನಂದಕ್ಕೆ ಪಾರವೇ ಇಲ್ಲ.  ಚಿತ್ರದುರ್ಗ, ತುಮಕೂರು ಬಯಲು ಸೀಮೆಯ ಜಿಲ್ಲೆಗಳ ಜನ ಬೇಸಿಗೆಯಲ್ಲಿ ಹುಣಸೆ ಚಿಗುರಿನಿಂದ ವಿಶೇಷ ಅಡುಗೆ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಹುಣಸೆ ಮರ ಕೇವಲ ಮುಟ್ಟಿಗಷ್ಟೆ ಬಳಕೆಯಾಗುವುದಿಲ್ಲ, ಅದರ ಹಣ್ಣು, ಹೂ, ಕಾಯಿ ಹಾಗೂ ಚಿಗುರಿಗೂ ಬಹು ಬೇಡಿಕೆ ಇದೆ.  ಹುಣಸೆಯ ಎಳೆ ಚಿಗುರಿನಿಂದ ಸಾಂಬಾರ್, ಬಸ್ಸಾರು, ಚಟ್ನಿ, ಪಲ್ಯ ಹೀಗೆ ವಿವಿಧ ಬಗೆಯ ಅಡುಗೆ ತಯಾರಿಸುತ್ತಾರೆ.

ವಸಂತಕಾಲದಲ್ಲಿ ಹುಣಸೆ ಚಿಗುರೊಡೆಯುತ್ತಿದ್ದು, ಈ ಸಮಯಕ್ಕಾಗಿಯೇ ಕಾದುಕುಳಿತಿರುತ್ತೇವೆ. ಕಾರಣ ಈ ಚಿಗುರಿನಿಂದ ಮಾಡಿದ ರುಚಿಕಟ್ಟಾದ ಅಡುಗೆ ತುಂಬಾ ಇಷ್ಟ. ಹುಣಸೆ ಚಿಗುರಿನ ಸಾರು ಸವಿಯಲು ಬಾಲ್ಯದಿಂದಲೂ ನನಗೆ ಬಹಳ ಇಷ್ಟ ಎನ್ನುತ್ತಾರೆ ಚಿತ್ರದುರ್ಗದ ತಿಪ್ಪಯ್ಯ

ಉಷ್ಣವಲಯದ ಬೆಳೆ ಹುಣಸೆ: ಹುಣಸೆ ಉಷ್ಣವಲಯದ ಬೆಳೆಯಾಗಿದ್ದು, ಕಡಿಮೆ ಮಳೆಬೀಳುವ ಪ್ರದೇಶ ಹಾಗೂ ಬಂಜರು ಭೂಮಿಯಲ್ಲಿ ಸಾಮಾನ್ಯವಾಗಿ ಇದನ್ನು ಬೆಳೆಯಲಾಗುತ್ತದೆ. ಹುಣಸೆ ಹಣ್ಣಿನ ತಿರುಳು ಹೆಚ್ಚು ರುಚಿಯಾಗಿದ್ದು, “ಸಿ” ಜೀವಸತ್ವನ್ನು ಹೊಂದಿದೆ. ಹುಣಸೆ ಬೆಳೆಯನ್ನು ಮರಳು ಮಿಶ್ರಿತ ಮಣ್ಣಿನಿಂದ ಹಿಡಿದು, ಕಲ್ಲು ಮಿಶ್ರಿತ ಮಣ್ಣಿನಲ್ಲೂ ಬೆಳೆಯಬಹುದು. ಅಲ್ಲದೇ ಫಲವತ್ತಾದ ಭೂಮಿಯಲ್ಲಿಯೂ ಚೆನ್ನಾಗಿ ಬರುತ್ತದೆ.

ಉಷ್ಣವಲಯದ ಪ್ರಬೇಧಗಳಂತೆ ಹುಣಸೆ ಕೂಡ ಸೂಕ್ಷ್ಮವಾಗಿದ್ದು, ರಾತ್ರಿ ವೇಳೆಯಲ್ಲಿ ಚಿಗುರೆಲೆಗಳು ಮುಚ್ಚಿರುತ್ತವೆ. ಇವು ಕೆಂಪು ಮತ್ತು ಹಳದಿ ಉದ್ದನೆಯ ಹೂವುಗಳಾಗಿವೆ. ಇದರಲ್ಲಿ ಕಿತ್ತಳೆ ಬಣ್ಣದ ಗೆರೆಗಳಿರುತ್ತವೆ. ಇದರ ಹಣ್ಣು ಎಲೆ, ಹಾಗೂ ತೊಗಟೆಯನ್ನು ಔಷಧಿಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹುಣಸೆ ಚಿಗುರು ಭಾರತೀಯ ತಿನಿಸುಗಳಲ್ಲಿ ಒಂದಾಗಿದೆ.

ಪೌಷ್ಠಿಕಾಂಶಗಳ ಆಗರ: ಹುಣಸೆ ಎಳೆ ಚಿಗುರು ಪೌಷ್ಠಿಕಾಂಶಗಳಿಂದ ಕೂಡಿದೆ. ಇದರಲ್ಲಿ ಅಧಿಕ ಕಬ್ಬಿಣಾಂಶವಿದ್ದು, ರಕ್ತವೃದ್ಧಿಗೆ ಸಹಕರಿಸುತ್ತದೆ. ಅಲ್ಲದೇ ಜೀರ್ಣ ಕ್ರಿಯೆಯಲ್ಲೂ ಉತ್ತಮ ಪಾತ್ರ ವಹಿಸುತ್ತದೆ. ದಿನನಿತ್ಯದ ಆಹಾರ ಪದಾರ್ಥದಲ್ಲಿ ಹುಣಸೆ ಚಿಗುರು ಸೇವನೆ ಉತ್ತಮ. ಇದರಿಂದ ಹೊಟ್ಟೆ ಉಬ್ಬರ, ಪಿತ್ತ, ಅಸಿಡಿಟಿಯಂತಹ ಆರೋಗ್ಯ ಸಮಸ್ಯೆ ನಿಯಂತ್ರಿಸಬಹುದು. ಹಾಗೂ ಮಲಬದ್ಧತೆ ನಿವಾರಣೆಗೆ ಸಹಕರಿಸುತ್ತದೆ.

 

-ಅಮಿತ್‍ಕರು ಎಸ್.ಎಸ್, ಚಿತ್ರದುರ್ಗ.

ಸಂಪರ್ಕ: 8880757640