೭) ಏಳನೇ ಸುತ್ತಿನಕೋಟೆ (ಏಕನಾಥೇಶ್ವರೀ ಬಾಗಿಲು) :-
ಗಣೇಶನ ಗುಡಿಯ ಹಿಂಭಾಗದಲ್ಲಿರುವ ಮಹಾದ್ವಾರವೇ ಏಳನೇ ಸುತ್ತಿನ ಕೋಟೆಯ ಏಕನಾಥೇಶ್ವರೀ ಬಾಗಿಲು. ಏಕನಾಥೇಶ್ವರಿ ಅಂಕಣಕ್ಕೆ ಬಂದರೆ ಮನೋಹರ ದೃಶ್ಯಗಳು ಗೋಚರಿಸುತ್ತವೆ. ಮಧ್ಯರಂಗದ ದಕ್ಷಿಣ ಭಾಗದಲ್ಲಿರುವ ದಿಬ್ಬದ ಮೇಲೆ ಏಕನಾಥೇಶ್ವರಿ ದೇವಸ್ಥಾನವು ಎತ್ತರದಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟಿದೆ.

ಇಲ್ಲಿ ದುರ್ಗದ ಅಧಿದೇವತೆಯಾದ ಏಕನಾಥೇಶ್ವರಿ, ಕಾಳಿಕಾಂಬಾ ಹಾಗೂ ಭೈರವ ವಿಗ್ರಹಗಳಿವೆ. ಈ ದೇವತಾ ಮಂದಿರವನ್ನು ಮೊದಲನೇ ಪಾಳೆಯಗಾರನಾದ ಮತ್ತಿತಿಮ್ಮಣ್ಣನಾಯಕನು ಕಟ್ಟಿಸಿದನೆಂದು ಚರಿತ್ರೆಯಿಂದ ತಿಳಿದು ಬರುತ್ತದೆ. ಇಲ್ಲಿರುವ ತೆಂಗಿನಕಾಯಿ ಗಾತ್ರದ ದಂತವೊಂದನ್ನು ಹಿಡಿಂಬನ ಹಲ್ಲು ಎಂದು ತೋರಿಸುತ್ತಾರೆ. ಮುಂಭಾಗದಲ್ಲಿರುವ ಉನ್ನತವಾದ ದೀಪಮಾಲೆ ಕಂಭವೂ, ಉಯ್ಯಾಲೆಯೂ, ಓಕುಳಿ ಹೊಂಡವೂ ಕಣ್ಮನ ಸೆಳೆಯುತ್ತವೆ. ಚಿತ್ರದುರ್ಗದ ಎರಡನೇ ಪಾಳೆಯಗಾರ ಗಡ್ಡದ ಮದಕರಿ ಓಬಣ್ಣನಾಯಕನ ಮತ್ತು ಕನಕಮ್ಮ ನಾಗತಿಯ ಚಿತ್ರಗಳು ದೀಪಮಾಲೆ ಕಂಭದಲ್ಲಿ ಕೆತ್ತಲ್ಪಟ್ಟಿವೆ. ಗರ್ಭಿಣಿ ಹೆಂಗಸನ್ನು ಬಲಿ ಕೊಟ್ಟರೆ ಕಂಭವು ನಿಲ್ಲುವುದಾಗಿ ರಾಜನಿಗೆ ಸ್ವಪ್ನವಾಯಿತಂತೆ. ಕನಕಮ್ಮ ನಾಗತಿಯು ಮುಂದೆ ಬಂದು ಬಲಿಯಾದಳೆಂದೂ, ಈ ಕಂಬವನ್ನು ಕಂಬದಮ್ಮ ಎಂದು ಜನ ಇಂದಿಗೂ ಪೂಜಿಸುತ್ತಾರೆ. ಉಯ್ಯಾಲೆಯಲ್ಲಿ ದೇವತೆಯ ಉತ್ಸವವೂ, ಓಕಳಿ ಹೊಂಡದಲ್ಲಿ ವಸಂತೋತ್ಸವ ಕಾಲದಲ್ಲಿ ಓಕುಳಿ ತುಂಬಿ ದೇವಿಗೆ ಅವಭೃತ ಸ್ನಾನ ಮಾಡಿಸಿ ನಂತರ ಓಕುಳಿಯಾಟವೂ ವೈಭವದಿಂದ ನಡೆಯುತ್ತಿದ್ದವು. ಈ ಏಳನೇ ಕೋಟೆಯ ಒಳ ಆವರಣದಲ್ಲಿ ಅನೇಕ ಸ್ಮಾರಕಗಳು ಈಗಲೂ ನಿಂತಿದ್ದು ಗತಕಾಲದ ವೈಭವವನ್ನು ಸ್ಮರಣೆಗೆ ತರುತ್ತವೆ.

ಚಿತ್ರದುರ್ಗ ಜಿಲ್ಲೆಯ ಸಂಶೋಧಕರು:- ಮಗ್ಗಲೂರು ಚನ್ನಬಸವಣ್ಣ (೧೮ನೇ ಶತ), ಕೊಡಗನೂರಿನವರು ಎನ್ನಲಾದ ಚಂದ್ರಭೀಮಕವಿಯ ಮದಕರಿರಾಜೇಂದ್ರದಂಡಕ (೧೮ನೇಶತ.), ಬೃಹನ್ಮಠದ ಮಹಾದೇವಕವಿ(೧೯ನೇಶತ.), ಆರ್.ನರಸಿಂಹಾಚಾರ್ಯ, ಮಾರ್ಟಿಮರ್ ವ್ಹೀಲರ್, ಕೆ.ವಿ.ರಾವ್, ಎಸ್.ಕೆ.ಮಿಶ್ರಾ, ಡಾ.ಅ.ಸುಂದರ, ಲಕ್ಷ್ಮೀನರಸು, ಡಾ||ಎಂ.ಹೆಚ್.ಕೃಷ್ಣ, ಡಾ.ಎಂ.ಶೇಷಾದ್ರಿ. ಹುಲ್ಲೂರು ಶ್ರೀನಿವಾಸ ಜೋಯಿಸರು, ಬರಮಣ್ಣ ಎಂಬಾತ ಬರೆದ ಮುರಿಗೆಸ್ವಾಮಿಗಳ ಸಿಂಗಾರದಪದ (ಲಾವಣಿ), ಎಂ.ಎಸ್.ಪುಟ್ಟಣ್ಣಯ್ಯ, ಡಾ.ಎಂ.ವಿ.ಶ್ರೀನಿವಾಸ್, ಆರ್.ನರಸಿಂಹಾಚಾರ್, ಎಂ.ಹನುಮಂತರಾವ್, ಎಂ.ವೀರಮುದ್ದಯ್ಯ ಬರೆದ ಚಿತ್ರದುರ್ಗದ ಲಡಾಯಿ ಲಾವಣಿ, ದುರ್ಗದ ಚಾರಿತ್ರಿಕ ಲಾವಣಿ ಬರೆದ ಲಾಳಸಿಂಗಿ ಸೋಮಣ್ಣ, ಸಿ.ರಂಗಯ್ಯ, ಎಲ್.ಗುಂಡಪ್ಪ, ಬಿ.ನೀಲಕಂಠಯ್ಯ, ಕೆ.ವಿ.ಮಂಜುನಾಥರಾವ್, ಲಾವಣಿ ಬಸವರಾಜಪ್ಪ, ಮಾಯಕೊಂಡದ ಎಸ್.ಕೆ.ಗೋವಿಂದಪ್ಪ, ಕ.ರಾ.ಕೃಷ್ಣಮೂರ್ತಿ ಇವರುಗಳು ದುರ್ಗದ ಚರಿತ್ರೆ ಒಳಗೊಂಡ ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಕೊಟ್ಟಿರುತ್ತಾರೆ. ಮತಿಘಟ್ಟ ಕೃಷ್ಣಮೂರ್ತಿ, ಜಿ.ಎಸ್.ಉಬರಡ್ಕ, ಅ.ರಾ.ಸೇ, ಜಿ.ಎಸ್.ದೀಕ್ಷಿತ್, ಬಾರಿಕೇರ ಕರಿಯಪ್ಪ, ದುರ್ಗದ ಚರಿತ್ರೆಯನ್ನು ಕ್ರಮವಾಗಿ ದಾಖಲಿಸಿ ಕೊಟ್ಟ ಬಿಳಿಚೋಡಿನ ಚಿನ್ನದಮನೆ ರಾಮಪ್ಪ ಹಾಗೂ ಚಿತ್ರದುರ್ಗ ಬಖೈರ್ ಖ್ಯಾತಿಯ ಭೀಮಾಜಿಪಂತ್, ಎಂ.ಎನ್,ಪ್ರಭಾಕರ್, ಬಿ.ಎಲ್.ರೈಸ್, ಬಿ.ರಾಮ್‌ರಾವ್, ಚನ್ನಪ್ಪ ಎರೇಸೀಮೆ, ಎಂ.ವಿ.ಚಿತ್ರಲಿಂಗಯ್ಯ, ಡಾ.ಕೆಳದಿ ವೆಂಕಟೇಶ ಜೋಯಿಸ್, ಕೆ.ಟಿ.ದೇಶಪಾಂಡೆ, ಪ್ರೊ.ಶ್ರೀಶೈಲಆರಾಧ್ಯ, ಪ್ರೊ.ಲಕ್ಷ್ಮಣ್‌ತೆಲಗಾವಿ, ಡಾ.ಬಿ.ರಾಜಶೇಖರಪ್ಪ ಇವರು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಕೆಲವು ಯುವ ಸಂಶೋಧಕರು ಈ ಕ್ಷೇತ್ರದೆಡೆಗೆ ಆಕರ್ಷಿತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗ ಕುರಿತ ವೈವಿಧ್ಯಮಯ ಸಾಹಿತ್ಯವನ್ನು ಒದಗಿಸಿದ್ದಾರೆ.

 

 

 

 

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.