ಬೀಸುವ ಕಲ್ಲುಗಳು:- ಕಾಮನ ಬಾಗಿಲು ದಾಟಿದರೆ ಕಾವಲು ಗೃಹದ ಮುಂದೆ ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ದೂರ ಸಾಗಿದರೆ ಬಂದಮ್ಮನ ಗುಹೆ ಸಿಗುವುದು. ಒಳಗೆ ಭಿನ್ನವಾದ ಬನಶಂಕರಿ ವಿಗ್ರಹವಿದೆ. ಗುಹೆಯ ಮುಂಭಾಗದಲ್ಲಿ ಮದ್ದು ಮಿಶ್ರಿತ ಮಣ್ಣಿನ ರಾಶಿಯನ್ನು ನೋಡಬಹುದು.

ಇಲ್ಲಿ ಮದ್ದಿನ ಮತ್ತು ಶಸ್ತ್ರಗಳ ತಯಾರಿಕೆಯ ಸ್ಥಳವಿದೆಂದು ತೋರುತ್ತದೆ. ಗುಹೆಯ ಪಕ್ಕದಲ್ಲೇ ನಾಲ್ಕು ಬೃಹದಾಕಾರದ ಬೀಸುವ ಕಲ್ಲುಗಳು ಇವೆ. ಅಲುಗಿನ ಚಕ್ರವೊಂದನ್ನು ಮಧ್ಯದ ಬಾವಿಯಲ್ಲಿ ನಿಲ್ಲಿಸಿ ಆನೆಯೊಂದರಿಂದ ಅದರ ಕಂಬವನ್ನು ಗಾಣದ ಎತ್ತಿನಂತೆ ತಿರುಗಿಸುತ್ತಿದ್ದರಂತೆ. ನಾಲ್ಕು ಬೀಸುವ ಕಲ್ಲುಗಳು ಸುತ್ತಿ ಸುತ್ತಿ ಮದ್ದನ್ನು ಅರೆಯುತ್ತಿದ್ದವಂತೆ. ಇಂತಹ ಕಲ್ಲಿನ ರುಬ್ಬುವ ಯಂತ್ರ ಭರತ ಖಂಡದಲ್ಲೇ ಇದ್ದಂತೆ ಕಂಡು ಬರುವುದಿಲ್ಲ. ಇದರ ಸಮೀಪದಲ್ಲಿಯೇ ಪಾಳು ಬಿದ್ದಿರುವ ಮಣ್ಣಿನ ಗೋಡೆಯ ಕಟ್ಟಡವು ಶಸ್ತ್ರ ಮತ್ತು ಅಸ್ತ್ರಗಳನ್ನು ಸಂಗ್ರಹಿಸಿಡುವ ಶಸ್ತ್ರಾಗಾರ ಎಂದು ಹೇಳಲಾಗುತ್ತಿದೆ.

ಒಂಟಿಕಲ್ಲು ಬಸವಣ್ಣ: ಕಾಮನಬಾಗಿಲು ದಾಟಿ ಒಳಬಂದರೆ ಉತ್ತರ ದಿಕ್ಕಿಗೆ ಸ್ವಲ್ಪ ದೂರದಲ್ಲಿ ಒಂಟಿಕಲ್ಲು ಬಸವನ ಗುಡಿಯಿದೆ. ಇದು ಆಕಾರದಲ್ಲಿ ಚಿಕ್ಕದಾಗಿದ್ದರೂ ಸುಂದರವಾಗಿದೆ. ಭಾರೀ ಬಂಡೆಯೊಂದರ ಮೇಲೆ ನೆಲೆಗೊಂಡಿರುವ ಈ ಗುಡಿಯು ಒಂಟಿ ಕಂಬ ಅಥವಾ ಕಲ್ಲಿನ ಮೇಲೆ ನಿಂತಿರುವುದರಿಂದ ಈ ಹೆಸರು ಬಂದಿದೆ. ಗೂಡಿನಂತಹ ಗುಡಿಯಲ್ಲಿ ಬಸವನಮೂರ್ತಿ ಇದೆ.
ಕಲ್ಲು ತೊಟ್ಟಿಗಳು: ಕೋಟೆಯ ನಾಲ್ಕನೇ ಹೆಬ್ಬಾಗಿಲನ್ನು ಪ್ರವೇಶಿಸುವ ಮುನ್ನ ಎಡಬದಿಯಲ್ಲಿ ಹುಟ್ಟು ಬಂಡೆಯಲ್ಲಿ ಕೊರೆದು ಮಾಡಿರುವ ಎರಡು ತೊಟ್ಟಿಗಳು ಕಾಣಿಸುತ್ತವೆ. ಅದರಲ್ಲಿ ಒಂದು ತೊಟ್ಟಿಯನ್ನು ಎಣ್ಣೆಕೊಳ ಎಂದೂ, ಮತ್ತೊಂದು ತೊಟ್ಟಿಯನ್ನು ಮದ್ದು ತುಂಬುವ ತೊಟ್ಟಿ ಅಂತಲೂ ಕರೆಯುತ್ತಾರೆ.

 

೪) ನಾಲ್ಕನೇ ಸುತ್ತಿನಕೋಟೆ ಅಥವಾ ಜಾಗಟೆ ಬಾಗಿಲು:-
ಕಾವಲು ಗೃಹದ ನಂತರ ಸಿಗುವ ನಾಲ್ಕನೇ ಸುತ್ತಿನ ಕೋಟೆಯಾಗಿದೆ. ಇಲ್ಲಿರುವ ಮಹಾದ್ವಾರವನ್ನು ಜಾಗಟೆ ಬಾಗಿಲೆಂದೂ, ಇದರ ಸಮೀಪದಲ್ಲಿದ್ದ ಗೂಡುಗಳಲ್ಲಿ ವಿಷದ ಕತ್ತಿಗಳನ್ನು ಇರಿಸುತ್ತಿದ್ದುದರಿಂದ ಇದಕ್ಕೆ ವಿಷದಕತ್ತಿ ಬಾಗಿಲು ಎಂತಲೂ ಹಾಗೂ ಸಮೀಪದಲ್ಲೇ ಚಿಕ್ಕ ಅರಮನೆಯೊಂದು ಇದ್ದುದರಿಂದ ಇದನ್ನು ಚಿಕ್ಕ ಅರಮನೆಬಾಗಿಲು ಎಂತಲೂ ಕರೆಯುತ್ತಾರೆ. ಈ ಬಾಗಿಲಿಗೆ ಹೊಂದಿಕೊಂಡಂತೆ ಇದ್ದ ಚಾವಡಿ ಈಗ ನಾಶವಾಗಿದೆ. ಈ ಬಾಗಿಲನ್ನು ಪ್ರವೇಶಿಸಲು ಹುಟ್ಟು ಬಂಡೆಯಲ್ಲಿಯೇ ಮೆಟ್ಟಿಲುಗಳನ್ನು ಕೊರೆದಿದ್ದಾರೆ. ಈ ಬಾಗಿಲಿನಿಂದ ಗಂಟೆ ಬಾಗಿಲಿಗೆ ಹೋಗುವ ಮುನ್ನ ಎಡಭಾಗದಲ್ಲಿ ಬಂಡೆಯೊಂದರ ಮೇಲೆ ಶಿವಾಲಯದ ಪುಟ್ಟ ಗುಡಿಯಿದೆ.

೫) ಐದನೇ ಸುತ್ತಿನಕೋಟೆ ಅಥವಾ ಗಂಟೆ ಬಾಗಿಲು:-
ಗಂಟೆ ಬಾಗಿಲು ಎಂದು ಕರೆಯುವ ಈ ಹೆಬ್ಬಾಗಿಲು ಐದನೇ ಸುತ್ತಿನ ಕೋಟೆಯಾಗಿದೆ. ಈ ಹೆಬ್ಬಾಗಿಲಿಗೆ ಹಿಂದೆ ಸಣ್ಣಸಣ್ಣ ಗಂಟೆಗಳನ್ನು ಜೋಡಿಸಿದ್ದರಿಂದ ಅದಕ್ಕೆ ಗಂಟೆ ಬಾಗಿಲೆಂದೂ ಕರೆಯುತ್ತಾರೆ. ಬಾಗಿಲ ಎಡಭಾಗದಲ್ಲಿ ದಿಣ್ಣೆಯ ಮೇಲೆ ಬೊಂಬೆಯ ಚಾವಡಿ ಅಥವಾ ಬಣ್ಣದ ಚಾವಡಿ ಇರುವುದು. ಇದರಲ್ಲಿ ಯುದ್ಧದಲ್ಲಿ ಮಡಿದ ಪಟ್ಟದ ಕುದುರೆ ಮತ್ತು ಆನೆಗಳ ವಿಗ್ರಹಗಳನ್ನು ಮಾಡಿಸಿ ಪೂಜಿಸುತ್ತಿದ್ದರಂತೆ. ಒಡೆದ ವಿಗ್ರಹಗಳನ್ನು ಈಗಲೂ ಕಾಣಬಹುದು. ಗಂಟೆಬಾಗಿಲ ಮುಂಭಾಗದ ಕೋಟೆಯ ಮೇಲೆ ಚಿಕ್ಕ ಅರಮನೆ ಇದ್ದಿತಂತೆ. ಈಗ ಪಾಳುಬಿದ್ದ ಗೋಡೆಯೊಂದು ಕಾಣುವುದು.
ಜಿಂಕೆಯ ಚಿತ್ರ :- ಗಂಟೆ ಬಾಗಿಲು ದಾಟಿ ಒಳನಡೆದರೆ ಎದುರಿಗೆ ಭೂಮಟ್ಟಕ್ಕಿರುವ ಒಂದು ಹುಟ್ಟು ಬಂಡೆಯ ಮೇಲೆ ಜಿಂಕೆಯನ್ನು ಹೋಲುವ ರೇಖಾಚಿತ್ರ ಕಂಡು ಬರುತ್ತದೆ. ಇದನ್ನು ಇತಿಹಾಸ ಪೂರ್ವಕಾಲದ ರಚನೆ ಎಂದು ಸಂಶೋಧಕರ ಅಭಿಪ್ರಾಯವಾಗಿದೆ.

 

 

 

 

 

 

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.