೧) ಹೊರಸುತ್ತುಕೋಟೆ (ಒಂದನೇ ಕೋಟೆ) :
ಚಿನ್ಮೂಲಾದ್ರಿಯ ಸಪ್ತ ಶಿಖರಗಳನ್ನೂ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಹಳೆಯ ಊರನ್ನೂ ಒಳಗೊಂಡಿದೆ. ಈ ಮಹಾದ್ವಾರದ ಎರಡೂ ಕೋಟೆಯು ಪಸರಿಸುತ್ತಾ ಹಳೆಯ ಊರನ್ನು ಸುತ್ತಿಕೊಂಡು ಚಿನ್ಮೂಲಾದ್ರಿ ಬೆಟ್ಟಗಳ ಹಿಂಭಾಗವನ್ನು ಸೇರಿದೆ. ಇದರ ಉದ್ದ ಸುಮಾರು ೧೨ ಕಿ.ಮೀ. ತಪ್ಪಲು ಪ್ರದೇಶದಲ್ಲಿ ಈ ಕೋಟೆಯ ಬಹುಭಾಗ ನಾಶವಾಗಿದೆ. ಇದರಲ್ಲಿ ರಂಗಯ್ಯನಬಾಗಿಲು, ಸಂತೇಬಾಗಿಲು, ಲಾಲ್‌ಗಡದ ಬತೇರಿಬಾಗಿಲು, ಉಚ್ಚಂಗಿಬಾಗಿಲು ಹಾಗೂ ಹನುಮನಬಾಗಿಲು ಎಂಬ ಐದು ಪ್ರಮುಖ ದ್ವಾರಗಳಿವೆ. ಈ ಹಿಂದೆ ಚಿತ್ರದುರ್ಗದ ಪ್ರವೇಶಕ್ಕೆ ಇವು ಪ್ರಮುಖ ದ್ವಾರಗಳಾಗಿದ್ದವು.

ರಂಗಯ್ಯನ ಬಾಗಿಲು :- ಪೂರ್ವ ದಿಕ್ಕಿನ ಕೋಟೆಯ ಮಹಾದ್ವಾರವೇ ರಂಗಯ್ಯನಬಾಗಿಲು. ಇದನ್ನು ಪಾಳೆಯಗಾರ ಕಸ್ತೂರಿ ರಂಗಪ್ಪನಾಯಕನು ಮನೆದೈವ ನೀರ್ಥಡಿ ಗ್ರಾಮದ ರಂಗನಾಥಸ್ವಾಮಿ ಹೆಸರಿನಲ್ಲಿ ನಿರ್ಮಿಸಿದನೆಂದು ಹೇಳಲಾಗಿದೆ. ಸಿರಾಕ್ಕೆ ಅಭಿಮುಖವಾಗಿರುವುದರಿಂದ ಸಿರಾದರ್‍ವಾಜ ಎಂದೂ ಕರೆಯುವರು. ಹಿಂದೆ ಇದರ ಇಕ್ಕೆಲಗಳಲ್ಲಿ ವಿಶಾಲವಾದ ಕಂದಕಗಳಿದ್ದವು. ಅವನ್ನು ಈಗ ಮುಚ್ಚಲಾಗಿದೆ. ದ್ವಾರದ ಎರಡೂ ಬದಿಗಳಲ್ಲಿ ಇದ್ದ ದಿಡ್ಡಿ ಬಾಗಿಲುಗಳನ್ನು ಸೀತಾರಾಮ ಮತ್ತು ಆಂಜನೇಯ ಗುಡಿಗಳನ್ನಾಗಿ ಪರಿವರ್ತಿಸಲಾಗಿದೆ. ಒಳಭಾಗದಲ್ಲಿ ಎರಡೂ ಕಡೆ ಇರುವ ರಕ್ಷಣಾ ಕೋಣೆಗಳಲ್ಲಿ ೧೯೫೧ ರಲ್ಲಿ ಮೈಸೂರು ರಾಜ್ಯಪಾಲರಾದ ಶ್ರೀಜಯಚಾಮರಾಜ ಒಡೆಯರಿಂದ ಪ್ರಾರಂಭಿಸಲ್ಪಟ್ಟ ಪ್ರಾಚ್ಯವಸ್ತು ಸಂಗ್ರಹಾಲಯವಿದೆ. ಚಂದ್ರವಳ್ಳಿ, ಬ್ರಹ್ಮಗಿರಿ ಹಾಗೂ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ದೊರೆತ ಚಾರಿತ್ರಿಕ ವಸ್ತುಗಳನ್ನು ಸಂರಕ್ಷಿಸಿಡಲಾಗಿದೆ. ಈ ಬಾಗಿಲಿನ ಎರಡೂ ಬದಿಗಳಲ್ಲಿ ಸುಸ್ಥಿತಿಯಲ್ಲಿರುವ ಬುರುಜುಗಳನ್ನು ಕಾಣಬಹುದು.

 

 

 

 

 

ಲೇಖನ ಸಂಗ್ರಹಕಾರರು :

ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.