ಚಿತ್ರದುರ್ಗಕ್ಕೆ ಬಂದಂತ ಪ್ರವಾಸಿಗರು ಕೋಟೆ ಕೊತ್ತಲು ಏಳು ಸುತ್ತಿನ ಕೋಟೆ ನೋಡಿ ಬೆರಗಾಗುತ್ತಾರೆ. ಆ ಏಳು ಸುತ್ತಿನ ಕೋಟೆಯ ಪರಿಚಯದ ಬಗ್ಗೆ ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು, ಅಂತರಾಳ ಕಾಲಂನಲ್ಲಿ ಹಲವು ಕಂತುಗಳಲ್ಲಿ ಬರೆಯಲಿದ್ದಾರೆ.
-ಸಂ

ಚಿತ್ರದುರ್ಗ ಕೋಟೆ ಕರ್ನಾಟಕದ ಅಮೂಲ್ಯ ಐತಿಹಾಸಿಕ ಸ್ಮಾರಕ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಲಾದ ಗಿರಿದುರ್ಗ, ಜಲದುರ್ಗ, ವನದುರ್ಗ ಹಾಗೂ ಧಾನ್ವನದುರ್ಗಗಳ ಲಕ್ಷಣಗಳನ್ನು ಒಳಗೊಂಡಿರುವ ವಿಸ್ಮಯಕಾರಿ ಚಿತ್ರದುರ್ಗ. ಇಲ್ಲಿ ಆಳಿದ ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರ ರಾಜಮನೆತನದವರು ಈ ಕೋಟೆಯ ಮೂಲರಚನೆಗೆ ಕಾರಣರು. ಕೋಟೆಯ ವಿಸ್ತರಣೆ ನಡೆದುದು ಪಾಳೆಯಗಾರರ ಕಾಲದಲ್ಲಿ. ಇದು ಏಳು ಸುತ್ತಿನ ಕೋಟೆ. ಜಿಲ್ಲಾ ಗೆಜೆಟಿಯರ್ ಪ್ರಕಾರ ಈ ಕೋಟೆಯಲ್ಲಿ ೧೯ ಅಗಸೆ ಬಾಗಿಲುಗಳು, ೩೮ ದಿಡ್ಡಿ ಬಾಗಿಲುಗಳು, ೩೫ ಕಳ್ಳಗಿಂಡಿಗಳು, ೦೪ ಗುಪ್ತ ದ್ವಾರಗಳಿವೆ. ಆದರೆ ೧೦೨ ಚೋರ್ಗಂಡಿ, ೩೬ ಹೆಬ್ಬಾಗಿಲು, ೬೮ ದಿಡ್ಡಿಬಾಗಿಲು, ೫೦೦ ಬತೇರಿ, ೫೦ಕ್ಕೂ ಹೆಚ್ಚು ಕಣಜಗಳು ಇಲ್ಲಿದ್ದವೆಂಬ ಹೇಳಿಕೆಯೂ ಇದೆ. ಆದರೆ ಇವುಗಳಲ್ಲಿ ಕೆಲವು ಕಾಲದ ದವಡೆಯಲ್ಲಿ ಸಿಕ್ಕು ಕಣ್ಮರೆಯಾಗಿವೆ, ನಾಶಹೊಂದಿವೆ.

ಚಿತ್ರದುರ್ಗವನ್ನು ಯಾವ ದಿಕ್ಕಿನಿಂದ ಪ್ರವೇಶಿಸಿದರೂ ಮೊದಲು ಗೋಚರಿಸುವುದು ಬೆಟ್ಟದ ಮೇಲಿನ ಕೋಟೆಯ ದೃಶ್ಯ. ಬೆಂಗಳೂರು ರಸ್ತೆಯ ಕಣಿವೆ ದಾಟುವಾಗ, ಬಳ್ಳಾರಿ ರಸ್ತೆಯ ಮದಕರಿಪುರ ಕಣಿವೆ ಹಾಯ್ದು ಬರುವಾಗ, ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಡ್ಡದ ರಂಗವ್ವನಹಳ್ಳಿ ಕಣಿವೆ ಮೂಲಕ ಸಾಗುವಾಗ, ದಾವಣಗೆರೆ ರಸ್ತೆಯ ಸೀಬಾರ ಕಣಿವೆ ದಾಟುವಾಗ, ಹೊಳಲ್ಕೆರೆ ರಸ್ತೆಯ ಗೊಡಬನಹಾಳು ಕಣಿವೆ ಸಮೀಪಿಸಿದಾಗ ನಿಧಿಯನ್ನು ಬಳಸಿದ ಸರ್ಪದಂತೆ ಬೆಟ್ಟಗಳನ್ನು ಸುತ್ತುವರೆದಿರುವ ಪ್ರಬಲ ಕೋಟೆ ಪ್ರವಾಸಿಗರ ಆಸಕ್ತಿಯನ್ನು ಕೆರಳಿಸುತ್ತದೆ. ಬೃಹತ್ತಾದ ಕಲ್ಲು ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಎತ್ತರವಾಗಿ ಕಟ್ಟಿದ ಗೋಡೆಗಳ ಈ ಕೋಟೆ ಪ್ರಾಚೀನ ಕಾಲದ ಒಂದು ಅದ್ಭುತವೇ ಆಗಿದೆ. ಆಯಕಟ್ಟಿನ ಸ್ಥಾನಗಳಲ್ಲಿರುವ ಹೆಬ್ಬಾಗಿಲುಗಳು, ದಿಡ್ಡಿ ಬಾಗಿಲುಗಳು, ಕಳ್ಳಗಿಂಡಿಗಳು, ವೀಕ್ಷಣಾಲಯಗಳು, ಫಿರಂಗಿ ವೇದಿಕೆಗಳು, ಕೋಟೆಯ ಮೇಲ್ಭಾಗದಲ್ಲಿ ಬಂದೂಕು ಹಾರಿಸಲು ವಿವಿಧ ಕೋನಗಳಲ್ಲಿ ರಚಿಸಿರುವ ರಂಧ್ರಗಳು ಈಗಲೂ ಕಂಡು ಬರುತ್ತವೆ.

 

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು, ಚಿತ್ರದುರ್ಗ.ಮೊ: ೯೪೪೮೬೬೪೮೭೮.