ಚಿತ್ರದುರ್ಗದ ಇತಿಹಾಸ, ಸಾಹಸದ  ಬಗ್ಗೆ ಅದೇಷ್ಟೋ ಲಾವಣಿ ಪದಗಳು ಇದ್ದಿರ ಬಹುದು  ಆದರೆ ಅಂತಹುದ್ದೇ ಆದ ಲಾವಣಿ ಪದ. ಲಾವಣಿ ಹೇಗೆ ಹೇಳುತ್ತಾರೋ ಅದರೇ ರೀತಿಯಾಗಿ ಕೆ.ಗಣೇಶಯ್ಯ ಅವರು ಪದಗಳ ಮೂಲಕ ನಿಮ್ಮೊಂದೆ ಇಟ್ಟಿದ್ದಾರೆ.

-ಸಂ

 

ಚಿತ್ತರದುರ್ಗದ ವಿಚಿತ್ರ ಕಥೆಗಳ ವಿಸ್ತಾರವ ಚೂರ್ ಬಿತ್ತುವೆನು | ಎತ್ತೆತ್ರದ ಏಳ್‌ಸುತ್ತಿನ ಕೋಟೆಯ ಎತ್ತರಿಸಿದವರ ನೆನಪಿದೆನು || ಚಿತ್ರದುರ್ಗವೆಂದ್ ಪ್ರತೀತಿ ಕಾರಣ ಚಿತ್ರನಾಯ್ಕನೊಂಶವು ಇನ್ನು | ಚಿತ್ರನಾಯ್ಕನ ವಂಶಕು ಮೊದಲು ಆಳ್ದವರಿತ್ತರು ಹತ್ತ್ ಹೆಸರನು || ತ್ರೇತಾಯುಗದಲಿ ಚಿನ್ಮೂಲಾದ್ರಿ ಪ್ರೀತಿ ಹೆಸರು ಹೊಂದಿದ ದುರ್ಗ | ಕೀರ್ತಿ ಪೊಂದಿತು ದ್ವಾಪರದಲಿ ಹಿಡಿಂಬಪಟ್ಟಣ ಎಂದುರ್ಗ | ಮತ್ತೆ ಕಲಿಯುಗದಿ ಮೊದಲ ಸಾಮ್ರಾಜ್ಯ ಚಂದ್ರವಳ್ಳಿ ಎಂದಿತ್ತಾಗ | ನಿತ್ಯವಾಗಿವೆ ಆ ವಸ್ತುಗಳು ಪ್ರದರ್ಶನಾಲಯದಲಿ ಈಗ | ಚಾಲುಕ್ಯರ ಕಾಲದಿ ಈ ದುರ್ಗಕ್ಕೆ ಸೂಳ್ಗಲ್ ನಾಡು ಎಂದ್ ಹೆಸರು | ಬಾದಾಮಿ ಚಾಲುಕ್ಯರು ತಾವ್ ಕರೆದರು ಬೆಮ್ಮತ್ತನೂರೆಂಬ ಹಿರಿಪೆಸರು || ಕಾಲಕ್ರಮದಲಿ ನೊಳಂಬವಾಡಿ ನಾಮವಿತ್ತರು ನೊಣಂಬರು | ಶಿಲ್ಪಕಲಾಪಿತರಾದ ಹೊಯಿಸಳರು ಪೆರುಮಾಳ್‌ಪುರ ಎಂದ್ ಕರೆದಿಹರು || ಬ್ರಹ್ಮಜ್ಞಾನಿಗಳ್ ಸಿದ್ಧರು ಇದ್ದರು ಸಿದ್ಧರದುರ್ಗ ಎಂದಾಯ್ತು | ಆ ಮೊದಲಿಂದಲೆ ಚಿತ್ರನಾಯ್ಕ ಕುಲ ಚಿತ್ರದುರ್ಗ ಎನಿಸಿಟ್ಟಾಯ್ತು | ಕಾಲ ಬಂದ ಹಾಗೆ ಗಂಡುನಾಡು ಮೇಲೆ ಎದ್ದಿತಣ್ಣ | ಇಲ್ಲಿ ಮೊದಲಾಳಿದನು ನಾಯ್ಕ ತಿಮ್ಮಣ್ಣ |

ಸಾಳಾನರಸಿಂಗರಾಯ ಮುತ್ಗೆ ಹಾಕಿದಾಗಣ್ಣ | ಹಸ್ತ ಕಡುಕೊಂಡ್ ಕುದುರೆ ತಂದ ಧೀರ ತಿಮ್ಮಣ್ಣ | ಕುಲುಬುರ್ಗಿಲ್ ಸಾಳಾನರಸಿಂಗ್ ಏಟು ತಿಂದ್ನಣ್ಣ | ಹೇಳಿ ಕಳಿಸಿ ಕರ್‍ಸಿಕೊಂಡ ತಿಮ್ಮಣ್ಣನ್ನ | ಬಳಿಗ್ಗೆ ಎದ್ದು ನೋಡೋದ್ರೊಳಗೆ ವಿಜಯನಗರ ಭಾವುಟವು ಹಾರುತ್ತಿತ್ತು ಕಲಬುರ್ಗಿ ಕೋಟೆ ಮೇಲಣ್ಣ || ಬೇಲಿ ಎಲ್ಲ ಕೋಟೆಯಾಗ್ಲು ಕಾಲ ಬಂತು ದುರ್ಗದಲ್ಲಿ | ಹಗ್ಲುರಾತ್ರಿ ಕೆಲಸ ನಡ್ಸಿದನು ತಿಮ್ಮಣ್ಣ | ಹೊಲ ಎಲ್ಲ ಬುರುಜು ಆಗಿ ನೆಲೆಲ್ಲ ಕೆಸರು ಆಗಿ| ಮಾಯಾಬಾಜಾರ್‌ನಂತೆ ಜನಕೆ ತೋರುತ್ತಿತ್ತಣ್ಣ || ಕೋಟೆ ಕೊತ್ಲ ಕಟ್ಟಲಿಕ್ಕೆ ಬೊಂಬಿನ ಘಾಟಿ ಏರಿಸಿಟ್ಟು | ಮೊಟ್ಟ ಮೊದಲು ಏಕನಾಥಿವರವ ಪಡಕೊಂಡಾ | ಕೋಟಿ ಕಲ್ಲ ಕೋಟೆ ಒಳ್ಗೆ ಅಜ್ಜಿ ಬಾಗ್ಲ ಕೋಟೆ ಮೊದಲು | ಎಷ್ಟು ಎತ್ರ ಅಬ್ಬಾ ನೋಡಿ ದೀಪದಸ್ತಂಭ | ತಿಮ್ಮಣ್ಣಾಯ್ಕ ಓಬಳನಾಯ್ಕ ಎರಡು ಸುತ್ತುಕೋಟೆ ಕಟ್ಟಿ | ರಂಗಪ್ಪನಾಯ್ಕ ಅಂಗಣ ಬುರುಜು ಏರಿ ಮಾಡಿದ್ದ | ಮುಂದೆ ಗಡ್ಡದ ಮದಕರಿನಾಯ್ಕ ದೊಡ್ಡ ದೊಡ್ಡ ಕಣಜ ಮಾಡ್ಸಿ ಓಬಣ್ಣಾಯ್ಕ ಶಿಖರ ಶಿರವಾಲೆ ಮಾಡ್ಸಿದಾ | ದೊಣ್ಣೆ ರಂಗಪ್ಪನಾಯ್ಕ ಅಲ್ಲಲ್ಲ್ ಎಣ್ಣೆಕೊಳ ತೋಡಿಸಿರಲು | ಬಿಚ್ಚುಗತ್ತಿ ಬರಮಪ್ಪನಾಯ್ಕ ಫಿರಂಗಿ ಏರ್‍ಸಿದ | ಹಿರೆಮದಕರಿನಾಯ್ಕ ಮಾಯಕೊಂಡ ಯುದ್ಧವೀರ ಹಾರಿಸಿಡುವ ಮದ್ದು ಗುಂಡು ಸಿದ್ಧ ಮಾಡಿದ| ಆರು ಸುತ್ತು ಕೋಟೆ ಏರಿ ಬಾರು ಹೂಡಿದ್ದ | ಸರ್‍ನೆ ಹಾರಿ ಹೊಡಿವ ಮದ್ದಿನ ಬಾಣ ಇಟ್ಟಿದ | ತಗಲಿದಾಕ್ಷಣವೆ ಬಗಲಿಗಿದ್ದವರೆಲ್ಲ ಬಿದ್ದು ಹೋಗ್ವ || ಅಲಗು ಕೈ ಅಂಬು ಭರ್ಜಿ ಧರಿಸಿ ಮೆರೆದಿದ್ದ || ಕಸ್ತೂರಿ ರಂಗಪ್ಪ ನಾಯ್ಕಗೆ ಪಟ್ಟವಾಯಿತು ನಂತರ | ಸುತ್ತು ಏಳು ಕೋಟೆ ಮಧ್ಯದಿ ಇತ್ತು ಅರಮನೆ ಪರಿವಾರ || ರಂಗಪ್ನಾಯ್ಕಗೆ ಕಂದರಿಲ್ಲದೆ ಆಗಿತ್ ಮೋಡದ ಭಾಸ್ಕರ | ಚಿಕ್ಕಮದಕರಿ ದತ್ತುಕೊಳ್ಳಲು ಮಾಡ್ತು ತೀರ್ಮಾನ ಸರ್ಕಾರ || ಇನ್ನೂರ್ ಹನ್ನೊಂದ್ ವರ್ಷವಾಳಿ | ಇನ್ನೂರು ಕೆರೆಬಾವಿ ಕಟ್ಸಿ | ನಾನೂರು ಗುಡಿ ದೇವಸ್ಥಾನ ದೀಪ ಬೆಳಗುತಾ | ನೂರು ಫಿರಂಗಿಯನೆಟ್ಟು ಸೈನ್ಯ ಎಂಬತ್ಸಾವಿರಿಟ್ಟು | ಬಂದೂಕ್ ಭಲ್ಲೆ ಬಾಣ ಖಡ್ಗ ಸುರ್‍ಗಿ ಬಹಳಿಡುತಾ | ಸನ್ಯಾಸಿ ಸಾಧು ಬ್ರಹ್ಮಜ್ಞಾನಿ ಸದ್ಧ ಗುರುಗಳೆಂದ್ರೆ | ವಿನಯ ವಿಧೇಯತೆಲಿದ್ದು ಆಜ್ಞೆ ಪಾಲ್ಸುತಾ | ಮುಂದಿನ ಹೆಜ್ಜೆ ಹಿಂದಕ್ಕಿಡದೆ | ಕಾಲಿಗೆ ಬಿದ್ದವರನ್ನ ಕೊಲದೆ | ವಾಲ್ಮೀಕಿ ಗೋತ್ರ ಕೀರ್ತಿ ಭಾವ್ಟ ಹಾರ್‍ಸುತಾ | ಕಾಮಗೇತಿ ವಂಶದವರು | ಉತ್ಸವಾಂಭ ನೊಲಿಸಿದವರು | ತಮ್ಮ ಜನ್ಮ ಗುರಿಯ ಸಾಧ್ಸಿಕೊಂಡ್ರು ಹಿಂದೆತಾ | ನೇಮದಿಂದ, ಶಿಸ್ತಿನಿಂದ, ಸಹನೆಯಿಂದ ಶೌರ್‍ಯದಿಂದ | ಪ್ರೇಮದಿಂದ ಕಟ್ಟಿ ದೇಶನೋಡಿ ಗುರುತಾ | ಪಾತಾಳೇಶ ಮಂಜುನಾಥ ಹೇಳ್ದ ಹೀಗೆ ತಾ. ||

(ಆಧಾರ:-ಸಿದ್ಧರದುರ್ಗ, ೧೯೭೨, ಕೆ.ವಿ.ಮಂಜುನಾಥರಾವ್ (ಲಾವಣಿ ಮಂಜಣ್ಣ) : ಆಧುನಿಕ ಯುವ ಸಮುದಾಯಕ್ಕೆ ಲಾವಣಿ ಸಾಹಿತ್ಯ, ಹಾಡಿನ ಪರಿಚಯ ಅಷ್ಟಕ್ಕಷ್ಟೆ. ಲಾವಣಿಯು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ಪ್ರಜೆಗಳಿಗೆ ದೇಶದ ಬಗ್ಗೆ ಪ್ರೀತಿ, ವಿಶ್ವಾಸ, ಹೋರಾಟದ ಭಾವನೆ, ಪೌರಾಣಿಕ, ಐತಿಹಾಸಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಮುಂತಾದ ಕಾರ್ಯಕ್ಷೇತ್ರಗಳ ಬಗ್ಗೆ ಅಪಾರವಾದ ಜ್ಞಾನ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜನತೆಗೆ ಲಾವಣಿ ಮಂಜಣ್ಣ ಎಂದೇ ಪ್ರಸಿದ್ಧರಾದ ಕೆ.ವಿ. ಮಂಜುನಾಥರಾವ್ ದುರ್ಗದ ಐತಿಹಾಸಿಕ ಕಥೆಯನ್ನು ಲಾವಣಿ ರೂಪದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅಪಾರ ಜ್ಞಾನ ಸಂಪತ್ತನ್ನು ಹೊಂದಿದ ಲಾವಣಿ ಮಂಜಣ್ಣನವರ ಬದುಕು ಹಸನಾಗಿರಲಿಲ್ಲ. ಅವರಿಂದ ಹಾಡು ಕೇಳಿ ಖುಷಿಪಟ್ಟವರೇ ಅಧಿಕ. ಇಂದಿನ ಸಂಚಿಕೆಯಲ್ಲಿ ಚಿತ್ರದುರ್ಗ ಇತಿಹಾಸ ಮತ್ತು ಪಾಳೆಯಗಾರರ ಸಾಹಸ ವರ್ಣನೆ ಬಗ್ಗೆ ಲಾವಣಿ ಪದವನ್ನು ಯಥಾವತ್ತಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇವರು ಬರೆದ ವೀರವನಿತೆ ಓಬವ್ವ ಹಾಗೂ ಚಂದ್ರವಳ್ಳಿಯ ಕುರಿತ ಲಾವಣಿ ಪ್ರಕಟಿಸಲಾಗುತ್ತದೆ. ಧನ್ಯವಾದಗಳು.).

ಸಂಗ್ರಹ : ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು, ಚಿತ್ರದುರ್ಗ

.ಮೊ: 9448664878