ಎಲ್ಲೆಲ್ಲೇನೇನ್ ಅರಿವಾಗದತರ ಕತ್ತಲೆ ಮುಸುಕಿತ್ತು | ಅಲ್ಲಲ್ಲಿ ಕರಾಳ ಬಾನಿಲಿ ತಾರೆಗಳ್ ಮಿಂಚಿತ್ತು | ಚೋಳ್ ಗುಡ್ಡದ ಆ ಕಳ್ಳಿ ಅಟ್ಟದಲಿ ಫಿರಂಗಿ ಕೂತಿತ್ತು | ಧಾಳಿಯ ಮಾಡಿದ ವೈರಿಯ ದಳಗಳ ಆಟವು ಮುಗಿದಿತ್ತು | ಝಳು ಝಳು ಝಳು ಝಳು ಕಂದಕ ನೀರು ಆಡುತ ಹರಿದಿತ್ತು | ಮೇಲಾಕಾಶದ ನಕ್ಷತ್ತಗಳು ನೀರಲಿ ಮಿಂಚಿತ್ತು || ಕಿಂಡಿಯ ಮೂಲಕ ಕನ್ನವ ಕೊರೆಯಲು ವೈರಿಯ ಹೊಂಚಿತ್ತು | ಥಂಡಿಯ ಹವದಲಿ ಕಾರ್ಗತ್ತಲೆಯಲಿ ಅಡ್ಡಕ್ಕೆ ನೀರಿತ್ತು | ಅಂಡಲೆ ವರ ತರ ಗುಂಪದು ಕೂಡುತ ದಂಡನು ಸೇರ್‍ತಿತ್ತು | ಗಂಡೆದೆ ಧೈರ್ಯದಿ ಖಡ್ಗವ ಪಿಡಿದು ಮೌನದಿ ಸಾಗಿತ್ತು | ಸಿಹಿನೀರ್ ಹೊಂಡದ ಕಂದಕ ತುಂಬಿ ಥಳ ಥಳ ಹೊಳಿತಿತ್ತು | ಸಾಹಸಿಗಳ ತಲೆ ಕಣ್ಮನ ಹೊಂಚಿಲಿ ಕಿಂಡಿ ಹುಡುಕುತ್ತಿತ್ತು | ಆ ಹಾ ಹಾ ಹಾ ಮೊಸರವಳ್ ನುಗ್ಗಿದ ದಾರಿಯ ನೆನಪಾಯ್ತು | ಸಹನೆ ಮರೆತು ಸರಸರನೆ ನುಗ್ಗಿದರು ಬಂಡೆಯು ಎದುರಾಯ್ತು || ಬಂಡೆಯ ಮೂಲೆ ಕಾರ್ಗತ್ತಲೆಯಲಿ ತಡಕುವಗತಿಯಾಯ್ತು | ಮಂಡೆ ತೂರುತದೆ ನಿಶ್ಚಯವಾಗಿ ಸರದಿಯು ಶುರುವಾಯ್ತು || ಸಂಜೆಲಿ ಸಜ್ಜೆ ತರಲೊಗಿದ್ದ ಓಬನು ಬಂದ್ ಹೊತ್ತು || ಗಂಜಿಯು ಬಿಸಿ ಬಿಸಿ ಮುದ್ದೆಯ ಚಟ್ಣಿ ಓಬಿಯು ಬಡಿಸಾಯ್ತು || ಗಂಡನ ಊಟಕೆ ನೀರ್‍ತರಲೆಂದು ಓಬಿಯು ಹೊರಟಾಯ್ತು || ತೊಂದರೆ ಗೊಂದನು ಕೂಲವಿರಲೆಂದು ಒನಕೆಯ ಪಿಡಿದಾಯ್ತು || ಬಂದಳುನಾರಿ ಬಲಗೈವನಿಕೆ ಎಡಗಡೆ ಮಡಕಿತ್ತು || ನಿಂದಳು ನೀರಿನ ತೂಬಿನ ಮೇಲೆ ಪಿಸುಮಾತ್ ಕೇಳ್ತಿತ್ತು || ಹನ್ನೆರಡ್ ಹೊಡಿತು ಗಂಟೆಯು ಆಗ ಊರೆಲ್ಲ ಮಲಗಿತ್ತು | ಅನ್ಯಭಾಷೆಯ ಪಿಸು ಪಿಸು ಮಾತು ವೈರಿದೆ ಅನಿಸಿತ್ತು || ಮನದಲಿ ವೈರಿಗಳೆಂದನ್ನಿಸಲು ಮಡಕೆಯು ಜಾರೋಯ್ತು | ಮನೆಯಜಮಾನ ಓಬಗೆ ನೀರು ಅದುವೆ ಮರೆತೋಯ್ತು || ಸುತ್ತಿ ಸೆರಗನು ಎತ್ತಿವನಕೆಯನು ಸಿಸ್ತಿಲಿ ನಿಂತಾಯ್ತು || ಕತ್ತಲೆಯಲ್ಲಿ ತಲೆ ಯೊಂದ್ ಬಂದು ಪಠಾಲ ಪೆಟ್ ಬಿತ್ತು || ಎತ್ತಿ ಎಸೆದು ಮತ್ತೊಂದಕೆ ದಾರಿ ಓಬಿಯ ಕೈ ಮಾಡ್ತು | ಒಂದಾಯಿತು ಮತ್ತೊಂದರ ಸರದಿ ಮಗದೊಂದ್ ಹಿಂದಿತ್ತು || ಒಂದರ ಹಿಂದೊಂದ್ ಸಾಲಿನ್ನೂರು ತಪ್ಪದೆ ಸಾಲಿತ್ತು || ಅಮಾವಾಸ್ಯೆಯು ಅಂದುಮಧ್ಯ ರಾತ್ರಿಲಿ ದುರ್ಗದಿ ಹೀಗಿತ್ತು | ನೇಮಾಯ್ತು ಈ ಓಬಿ ಚಂಡಿಗೆ ಮತ್ತೊಂದ್ ಮರತೋಯ್ತು | ನೂರಿನ್ನೂರು ಶತ್ರು ಶಿರಗಳು ಎಳನೀರ್ ಬುರುಡೆ ಯಂತಿತ್ತು | ಅರಿವನು ಮರಸಿದ ಕತ್ತಲೆಯಲ್ಲಿ ಮಾಯಾ ಯುದ್ಧವೆ ಆಗಿತ್ತು || ನೀರಿಗೆ ಹೋದ ಓಬಿಯ ಹುಡುಕುತ ಓಬನ ಕಾತುರ ಹೆಚ್ಚಾಯ್ತು | ವೈರಿಯೆಂದ್ಕೊಂಡು ಬಡೆಯಲೆತ್ತಿದಳು ಎಷ್ಠಿತ್ತು ಆಕೆಯ ತುರ್ತು | ತಪ್ಪಿಸಿ ಕೊಂಡು ಕಹಳೆಯ ನೂದಿದ ಓಬರವರವನೆ ಆ ಹೊತ್ತು | ದೊಪ್ಪನೆ ಹಾರಿದರ್ ದುರ್ಗ ಪಡೆಯುವರು ಎಲ್ಲೆಲ್ಲೊ ಇದ್ದರು ಸುತ್ತು || ರಾಜಮದಕರಿ ಸ್ವತಃ ಬಂದನು ಓಬನ ಕಹಳೆಗೆ ಗಮನಿತ್ತು | ರಾಜನ ಹಿಂದ್ ಮುಂದೆ ನೂರಾರ್ ದೀಪ ಬಂದಾಗ ಹಗಲಂತಾಯ್ತು | ಕುಂಕುಮಭಿಷೇಕ ಆಗ ಆದಂತೆ ಓಬಿಯ ವಿಗ್ರಹ ಕಂಡಿತ್ತು | ಒಂದೂ ಮಾತಿಲ್ಲ ಜ್ಞಾನವು ತಪ್ಪಿದೆ ದುರ್ಗಿಯೆ ಓಬಿ ಹೌದಾಯ್ತು | ನಾಕಾರ್ ಜನರು ಎತ್ತುತ್ತತಂದು ರಾಜನ ಪಾದದಿ ಮಲಗ್‌ಸಾಯ್ತು | ಆಕಾರ ನೋಡಿ ರಾಜನೆ ಅಂದ ಸಾಕುವ ತಾಯಿ ನಿಜವಾಯ್ತು || ಸಾರ್ಥಕಳಾದೆ ದುರ್ಗದ ಪುತ್ರಿ ಹೆಸರದು ಚಿರಸ್ಥಾಯಿಯಾಯ್ತು | ಕರ್ತವ್ಯದಲ್ಲಿ ಪ್ರಾಣ ಪಣ ವಿಟ್ಟು ವೈರಿಗೆ ಮಾರಿಯ ರೂಪಾಯ್ತು || ನೋಡಲಾಗದೆ ನುಡಿಯಲಾಗದೆ ಓಬಿಯಧ್ವನಿ ಹೀಗ್ ಹೊರಟಿತ್ತು | ಕನ್ನಡ ನಡೆ ನುಡಿ ಅನ್ನ ನೆರಳು ಉಪ್ಪುಂಡದ್ದು ಹೇಗ್ ಮರತೀತು | ಕನ್ನಾಡಿಗೆ ಈ ಚೆನ್ನಾಡಿಗೆ ವಿಮುಖಾದರೆ ಬಾಳ್ ಬರಿದಾದೀತು | ಎಂದೆಂದಿಗು ಈ ನಾಡಿನಲಿ ನಾನು ಗುಡಿಸುವಳಾದರೆ ಬಹು ಒಳಿತು | ಚಂದದ ಪಾದ ಉತ್ಸವಾಂಬೆಯ ದುರ್ಗ ಸೇವೆ ಸಿಗಲಿ ಕಾಲಕಾಲ್ಕು || ಓಬಿಗೆ ಅಮರ ಪದವಿಯಾಯಿತು | ಓಬಿಯನಾಮ ಕೀರ್ತನೆ ಯಾಯ್ತು | ಓಬಿ ಓಬ ಇಬ್ಬರ ಶ್ಲಾಘಿಸಿ ರಾಜನಿಂದ ಬಹುಮಾನಾಯ್ತು || ಮಾತಿನಿಂದಲ್ಲ ಕೃತಿಯಲಿ ತೋರಿರಿ ಶ್ರದ್ಧೆಯಿಂದಲು ನಿಂಶಿಸ್ತು | ಪಾತಾಳೇಶ್ವರ ಮಂಜುನಾಥನು ತಿಳಿದಿದ್ದ್ ಈಗೀಗ ಹೇಳಾಯ್ತು ||

(ಆಧಾರ:-ಸಿದ್ಧರದುರ್ಗ, ೧೯೭೨, ಕೆ.ವಿ.ಮಂಜುನಾಥರಾವ್ : ತಾನಿದ್ದ ಸ್ಥಳದಲ್ಲಿಯೇ ಲಾವಣಿಗಳನ್ನು ರಚಿಸಿ ಮನರಂಜನೀಯವಾಗಿ ಹಾಡಬಲ್ಲವರಾಗಿದ್ದರು. ಇತಿಹಾಸ ಸಂಶೋಧನಾ ಪ್ರಸಕ್ತ ಐತಿಹ್ಯ ವಿಮರ್ಷನ ವಿಚಕ್ಷಣ ಹುಲ್ಲೂರು ಶ್ರೀನಿವಾಸ ಜೋಯಿಸರಿಂದ ತರಬೇತಿಗೊಂಡ ಲಾವಣಿ ಮಂಜಣ್ಣ ಚಿತ್ರದುರ್ಗ ಇತಿಹಾಸದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು. ಅನೇಕ ಸ್ಮಾರಕಗಳ ವಿವರಣೆ ನೀಡಬಲ್ಲವರಾಗಿದ್ದರು).

 

 

 

 

 

 

ಸಂಗ್ರಹ : ಕೆ.ಪಿ.ಎಂ. ಗಣೇಶಯ್ಯ,

ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.