ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯಾ ಬಾಹುಳ್ಯವಿರುವ ದೇಶ. ಈ ದೇಶ ಹತ್ತಾರು ಸಾಂಕ್ರಾಮಿಕ ರೋಗಗಳಿಗೆ ಎದೆಗೊಟ್ಟು ನಿಂತು, ಅವುಗಳನ್ನು ನಿರ್ಮೂಲನೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಇಡೀ ದೇಶವೇ ಎಂದಿಗೂ ಸ್ತಬ್ಧಗೊಂಡದ್ದಿಲ್ಲ.

ಸಾಂಕ್ರಾಮಿಕ ರೋಗಗಳು ಮಾರಣಾಂತಿಕವಾಗಿ ಹಬ್ಬಿದಾಗ ಜನರು ಸಾಮೂಹಿಕ ಗುಳೆ ಹೋಗಿರುವ ನಿದರ್ಶನಗಳು ಮಾತ್ರ ಇವೆ. ಆದರೆ, ಇದೇ ಪ್ರಥಮ ಬಾರಿಗೆ ಕೊರೊನಾ ಸೋಂಕನ್ನು ತಡೆಗಟ್ಟಲು ಇಡೀ ದೇಶವೇ ಬರೋಬ್ಬರಿ 50 ದಿನ ಲಾಕ್‌ಡೌನ್ ಆಯಿತು. (ಸಾರ್ಸ್, ಎಬೊಲೊ ಸೋಂಕಿಗೆ ಹೋಲಿಸಿದಾಗ ಕೊರೊನಾ ಸೋಂಕು ನಿರಪಾಯಕಾರಿ ಎಂದು ಗೊತ್ತಿದ್ದರೂ!!!)ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡವು. ಇದರಿಂದ ದೇಶದ ಆರ್ಥಿಕತೆಗೆ ಸರಿಸುಮಾರು 125 ಲಕ್ಷ ಕೋಟಿ ರೂಪಾಯಿ ಲುಕ್ಸಾನಾಗಿದೆ ಎಂಬ ವರದಿ ಇದೆ.

ಚೀನಾದಲ್ಲಿ ಕೊರೊನಾ ಸೋಂಕಿನ ಕುರಿತು ಅಧಿಕೃತ ವರದಿಯಾಗಿದ್ದು ಡಿಸೆಂಬರ್‌ನಲ್ಲಿ. ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು ಜನವರಿಯಲ್ಲಿ. ಅದಾಗಲೇ ಹಲವು ದೇಶಗಳಲ್ಲಿ ಕೊರೊನಾ ಅವಾಂತರ ಶುರುವಾಗಿತ್ತು. ನಮ್ಮನ್ನಾಳುವವರು ಜವಾಬ್ದಾರಿಯುತರೂ, ದೂರದೃಷ್ಟಿ ಉಳ್ಳವರೂ ಆಗಿದ್ದರೆ ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಗಡಿಗಳನ್ನು ಮುಚ್ಚಿರುತ್ತಿದ್ದರು. ದೇಶದ ಆರ್ಥಿಕತೆ ಮಾತ್ರವಲ್ಲದೆ ಸರ್ಕಾರದ ಖಜಾನೆಗೂ ಹೊರೆಯಾಗುವ ಲಾಕ್‌ಡೌನ್ ನಿರ್ಧಾರ ಕೈಗೊಳ್ಳುವ ಬದಲು ಆರೋಗ್ಯ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿಡುತ್ತಿದ್ದರು. ದೇಶದಲ್ಲಿ ಜಾರಿ ಇರುತ್ತಿದ್ದ ಆರ್ಥಿಕ ಚಟುವಟಿಕೆಗಳಿಂದ ಹರಿದು ಬರುವ ತೆರಿಗೆಯನ್ನು ವೈದ್ಯಕೀಯ ವ್ಯವಸ್ಥೆಯ ಪುನಶ್ಚೇತನ ಹಾಗೂ ವಿಸ್ತರಣೆಯ ಮೂಲಕ ಬಂದೆರಗಲಿರುವ ಅಪಾಯವನ್ನು ಎದುರುಗೊಳ್ಳಲು ಸಜ್ಜಾಗಿರುತ್ತಿದ್ದರು.

ಆದರೆ, ದೇಶದ ಆರೋಗ್ಯ ವ್ಯವಸ್ಥೆಯ ಶ್ರೇಯಾಂಕ ಜಾಗತಿಕ ಮಟ್ಟದಲ್ಲಿ ನೂರಕ್ಕಿಂತಲೂ ಕೆಳಗಿದೆ ಎಂಬುದೇ ನಮ್ಮನ್ನಾಳುವವರನ್ನು ಕಂಗೆಡಿಸಿತು. ಅದನ್ನು ಪುನಶ್ಚೇತನಗೊಳಿಸಿ ಸನ್ನದ್ಧಗೊಳಿಸುವ ಬದಲು ಲಾಕ್‌ಡೌನ್ ಮಾಡುವುದು ತೀರಾ ಸುಲಭ ಎಂದು ಭಾವಿಸಿದರು. ತನ್ನ ಆಪ್ತ ಬಳಗದ ಇಂತಹ ಸುಲಭೋಪಾಯವನ್ನು ಯಾವುದೇ ನಿಕಷಕ್ಕೊಡ್ಡದೆ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಮಾರ್ಚ್ 22ರ ರಾತ್ರಿ ಎಂಟು ಗಂಟೆಗೆ ದಿಢೀರ್ ಲಾಕ್‌ಡೌನ್ ಘೋಷಿಸಿದರು. ಹೀಗೇ ದಿಢೀರ್ ಲಾಕ್‌ಡೌನ್ ಘೋಷಿಸುವ ಮುನ್ನ ದೇಶದಲ್ಲಿ ಎಷ್ಟು ಕೋಟಿ ಮಂದಿ ವಲಸೆ ಕಾರ್ಮಿಕರಿದ್ದಾರೆ ಎಂಬ ಅಂದಾಜು ಪ್ರಧಾನಿಗಾಗಲಿ, ಅವರ ಆಪ್ತ ಬಳಗಕ್ಕಾಗಲಿ ಇರಲೇ ಇಲ್ಲ. ಹೀಗಾಗಿ ಇಡೀ ದೇಶ ದೇಶ ವಿಭಜನೆಯ ನಂತರದ ಮತ್ತೊಂದು ಮಹಾವಲಸೆಗೆ ಸಾಕ್ಷಿಯಾಯಿತು.

ಇದರಿಂದ ಹಲವಾರು ಅಡ್ಡ ಪರಿಣಾಮಗಳು ಏಕಕಾಲಕ್ಕೆ ಕಾಣಿಸಿಕೊಂಡವು:

1. ವಲಸೆ ಕಾರ್ಮಿಕರನ್ನು ನೆಚ್ಚಿಕೊಂಡು ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ನಗರಗಳು ಏಕಾಏಕಿ ಖಾಲಿಯಾದವು.

2. ನಗರದಲ್ಲಿನ ವಲಸೆ ಕಾರ್ಮಿಕರ ದುಡಿಮೆಯ ಉಳಿತಾಯದಿಂದ ನಡೆಯುತ್ತಿದ್ದ ಗ್ರಾಮೀಣ ಆರ್ಥಿಕತೆ ಕುಸಿದು ಬಿತ್ತು.

3. ವಲಸೆ ಕಾರ್ಮಿಕರ, ವ್ಯಾಪಾರೋದ್ಯಮಿಗಳ ಬಾಡಿಗೆ ದುಡ್ಡಿನಿಂದ ಜೀವನ ಸಾಗಿಸುತ್ತಿದ್ದ ಹಿರಿಯ ನಾಗರಿಕರು ಅವರ ವಲಸೆಯಿಂದ ದಿಕ್ಕುಗಾಣದಾದರು.

4. ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದರಿಂದ ಸಾರಿಗೆ ವ್ಯವಸ್ಥೆ ಚೇತರಿಸಿಕೊಳ್ಳಲಾರದಷ್ಟು ನಷ್ಟ ಅನುಭವಿಸಿತು.

5. ಇವೆಲ್ಲಕ್ಕಿಂತ ಮೇಲಾಗಿ, ಸರ್ಕಾರದ ಖಜಾನೆ ಬರಿದಾಗಿ ಆರೋಗ್ಯ ವ್ಯವಸ್ಥೆಯನ್ನು ನಿಭಾಯಿಸಲಾಗದ, ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಸಾಧ್ಯವಾಗದ ಸ್ಥಿತಿ ತಲುಪಿತು.

ಇವೆಲ್ಲಕ್ಕೂ ಪ್ರಮುಖ ಕಾರಣ ಅವೈಜ್ಞಾನಿಕ ಲಾಕ್‌ಡೌನ್. ತಜ್ಞ ವೈದ್ಯರ ಪ್ರಕಾರ ಈ ಜಗತ್ತಿನಲ್ಲಿ ಸೃಷ್ಟಿಯಾಗುವ ಯಾವುದೇ ವೈರಸ್ ಅವಿನಾಶಿನಿ. ಅವುಗಳನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಿಮ್ಮೆಟ್ಟಿಸಬಹುದೇ ಹೊರತು ಅವುಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ವೈರಸ್‌ನಿಂದ ಹಬ್ಬುವ ಕಾಯಿಲೆಯನ್ನು ನಿರ್ಮೂಲ ಮಾಡಬಹುದೇ ಹೊರತು ವೈರಸ್‌ನನ್ನಲ್ಲ. ಸಣ್ಣ ವಯಸ್ಸಿನಲ್ಲೇ ನೀಡುವ ಬಿಸಿಜಿ, ಪೋಲಿಯೊ ಲಸಿಕೆಗಳು ಮಾಡುವುದು ಇಂತಹ ರೋಗ ನಿರೋಧಕ ಶಕ್ತಿಯ ವರ್ಧನೆಯನ್ನು ಮಾತ್ರ.

ಇಷ್ಟು ಪ್ರಾಥಮಿಕ ತಿಳಿವಳಿಕೆಯಾದರೂ ನಮ್ಮನ್ನಾಳುವವರಿಗೆ, ಅವರ ಸುತ್ತಲಿನ ಆಪ್ತ ವಲಯಕ್ಕೆ ಇರಬೇಕು ಎಂಬುದು ಅಪೇಕ್ಷಣೀಯ. ದುರಂತವೆಂದರೆ, Srinivas Kakkilaya ತರಹದ ತಜ್ಞ ವೈದ್ಯರು ಲಾಕ್‌ಡೌನ್ ಅವೈಜ್ಞಾನಿಕ ಹಾಗೂ ಆರ್ಥಿಕವಾಗಿ ವಿನಾಶಕಾರಕ ಎಂದು ಎಷ್ಟೇ ಎಚ್ಚರಿಸಿದರೂ ಅವರ ಮಾತಿಗೆ ಕಿವಿಗೊಡುವುದಿರಲಿ, ತಮ್ಮ ಭಕ್ತರಿಂದಲೇ ಅವರ ವಿರುದ್ಧ ದೂರು ದಾಖಲಿಸುವ ನಿರ್ಲಜ್ಜತೆ ಮೆರೆದರು. ಇದೀಗ ಲಾಕ್‌ಡೌನ್ ಪ್ರಕ್ರಿಯೆ ಘೋಷಣೆಯಾಗಿ ನೂರು ದಿನ ಉರುಳಿ ಹೋಗಿದೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ12 ಲಕ್ಷ ಸಮೀಪಿಸಿದೆ. ಇದರೊಂದಿಗೆ ದೇಶದ ಆರ್ಥಿಕತೆಯೂ ಮೂರಾಬಟ್ಟೆಯಾಗಿ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಹುಳುಕನ್ನು ಇಡೀ ವಿಶ್ವಕ್ಕೇ ತೆರೆದು ತೋರಿಸಿದೆ. ಈ ಹುಳುಕು ಬಯಲಾಗುತ್ತದೆ ಎಂಬ ಭೀತಿಯಿಂದಲೇ ಇಡೀ ದೇಶಕ್ಕೇ ಲಾಕ್‌ಡೌನ್ ಹೇರಿದ್ದ ನಮ್ಮನ್ನಾಳುವವರು, ಈಗ ಇಡೀ ದೇಶಕ್ಕೆ ಆವರಿಸಿರುವ ಕೊರೊನಾ ಸೋಂಕನ್ನು ಕಂಡು ತಮ್ಮ ಬಾಯನ್ನೇ ಲಾಕ್‌ಡೌನ್ ಮಾಡಿಕೊಂಡಿದ್ದಾರೆ. ಇದಿಷ್ಟು ಲಾಕ್‌ಡೌನ್ ಪ್ರವರ.

ಇನ್ನು ಲಾಕ್‌ಡೌನ್ ನಿಯಂತ್ರಣಕ್ಕೆ ಮೊರೆ ಹೋಗಿದ್ದು ಅತ್ಯಂತ ಅನಾಗರಿಕ ಪದ್ಧತಿಗೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಸೋಂಕು ನಿಯಂತ್ರಿಸುವ ಜವಾಬ್ದಾರಿಯನ್ನು ಪೊಲೀಸರ ಲಾಠಿ, ಕೊಳಕು ಬೈಗುಳಕ್ಕೆ ನೀಡಿ ವಿಶ್ರಮಿಸಿಬಿಟ್ಟತು ನಮ್ಮ ಆಡಳಿತ ಯಂತ್ರ. ಹೀಗೆ ಮಾಡುವಾಗ ನಮ್ಮನ್ನಾಳುವವರು ಮರೆತಿದ್ದು ಪೊಲೀಸರ ಕೈಗೆ ಜನರನ್ನು ನಿಯಂತ್ರಿಸುವ ಅಧಿಕಾರ ನೀಡಿ ಯಾವ ಜನ ಪ್ರತಿನಿಧಿಯೂ ನಿರುಮ್ಮಳವಾಗಿ ನಿದ್ದೆ ಮಾಡಿದ್ದಿರಲಿ, ಸತ್ತಿದ್ದೂ ಇಲ್ಲ. ಇದಕ್ಕೆ ಜರ್ಮನಿಯ ಅಡಾಲ್ಫ್ ಹಿಟ್ಲರೇ ಜ್ವಲಂತ ಉದಾಹರಣೆ. ಹಿಂಸಿಸುವ ಅಧಿಕಾರವನ್ನು ಶಾಸನಾತ್ಮಕವಾಗಿ ಪಡೆದಿರುವ ಪೊಲೀಸ್ ವ್ಯವಸ್ಥೆ, ತಮ್ಮ ಮೇಲಿನವರು ಬಯಸಿದ್ದಕ್ಕಿಂತ ಹೆಚ್ಚು ಕ್ರೂರವಾಗಿ ವರ್ತಿಸಿ, ಆಳುವವರು ಕೊನೆಗೆ ದಯನೀಯವಾಗಿ ಸಾಯುವಂತೆ ಮಾಡಿರುವುದಕ್ಕೆ ಚರಿತ್ರೆಯ ಪುಟಗಳಲ್ಲಿ ನಿದರ್ಶನಗಳಿವೆ. ಹಿಟ್ಲರ್, ಖೊಮೇನಿ, ಮುಸಲೋನಿಯಂತಹ ಸರ್ವಾಧಿಕಾರಿಗಳು ಹೀನಾಯವಾಗಿ ಸತ್ತಿದ್ದು ಪೊಲೀಸ್ ವ್ಯವಸ್ಥೆ ತೋರಿದ ಅತಿರೇಕದ ಕ್ರೌರ್ಯದಿಂದ. ಈ ನೆದರು ನಮ್ಮನ್ನಾಳುವವರಿಗೆ ಇರಲಿಲ್ಲ ಎಂದರೆ ಅವರಿಗೂ ನಿರಂಕುಶ ಪ್ರಭುತ್ವದ ಕನಸು ಬಿದ್ದಿದೆ ಎಂದೇ ಅರ್ಥ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಅದೆಷ್ಟು ಜನವಿರೋಧಿಯಾಗಿ ಬಳಸಲಾಗುತ್ತಿದೆ ನೋಡಿ: ಪ್ರಜಾಸತ್ತಾತ್ಮಕ ಪ್ರತಿಭಟನೆಗೂ ಅದನ್ನು ಅನ್ವಯಿಸಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ನಿರಂಕುಶ, ಜನಪೀಡಕ ಪ್ರಭುತ್ವ ತಾನೇತಾನಾಗಿ ಸಾಕಾರಗೊಳ್ಳಲಿದೆ. ಅದನ್ನು ಹೇಗಾದರೂ ಮಾಡಿ ಸಾಧಿಸಬೇಕು, ಒಕ್ಕೂಟ ವ್ಯವಸ್ಥೆಯಲ್ಲಿ ಆದಷ್ಟೂ ಹೆಚ್ಚು ರಾಜ್ಯಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತುರ್ತು ಪರಿಸ್ಥಿತಿ ಹೇರಬೇಕು ಎಂಬ ಹುನ್ನಾರದ ಭಾಗದಂತಿದೆ ಮಧ್ಯಪ್ರದೇಶ ಸರ್ಕಾರದ ಪತನ ಹಾಗೂ ರಾಜಸ್ಥಾನ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು.

ಈಗಲಾದರೂ ಪ್ರತಿಪಕ್ಷಗಳ ಮೈಕೊಡವಿ ಮೇಲೇಳಬೇಕಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ validity ಹಾಗೂ ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗೂ ಆ ಕಾಯ್ದೆಯನ್ನು ಅನ್ಬಯಿಸುವುದರ ಹಿಂದಿನ ಹುನ್ನಾರದ ಬಗ್ಗೆ ಜನಾಂದೋಲನ ರೂಪಿಸಬೇಕಿದೆ. ಸಾಧ್ಯವಾದರೆ ಈ ಕುರಿತು ನ್ಯಾಯಾಲಯಗಳಲ್ಲೂ ಪ್ರಶ್ನಿಸಬೇಕಿದೆ. ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪ್ರತಿಪಕ್ಷಗಳು ಒಂದನ್ನು ಸ್ಪಷ್ಡವಾಗಿ ಅರಿಯಬೇಕಿದೆ: ಪ್ರಜಾಸತ್ತೆ ಉಳಿದರೆ ಮಾತ್ರ ಅವುಗಳ validity ನವೀಕರಣಗೊಳ್ಳಲಿದೆ. ಇದನ್ನು ಸ್ಪಷ್ಟವಾಗಿ ಅರಿತಿದ್ದರಿಂದಲೇ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗಿದ್ದು. ಅದಕ್ಕಾಗಿ ಪ್ರತಿಪಕ್ಷಗಳ ನಾಯಕರು ಜೈಲಿಗೆ ಹೋಗಲೂ ಅಂಜದೆ ಹೋದದ್ದು ಈಗಿನ ಕಾಂಗ್ರೆಸ್, ಕಮ್ಯೂನಿಸ್ಟ್‌ ಪಕ್ಷಗಳೆಲ್ಲಕ್ಕೂ ಒಂದು ರಾಜಕೀಯ ಪಾಠ.

-ಸದಾನಂದ ಗಂಗನಬೀಡು