ಚಾಮರಾಜನಗರ : ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಹರಡುವುದನ್ನು ತಡೆಯಲು ಜಿಲ್ಲೆಯಲ್ಲಿ ಅಂತರ ಜಿಲ್ಲೆ, ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳ ಆರಂಭ, ಜಿಲ್ಲೆಯ ಪ್ರೇಕ್ಷಣಿಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ಸೇರಿದಂತೆ ಹಲವಾರು ಮುಂಜಾಗ್ರತಾಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಗರೂಕತಾ ಕ್ರಮಗಳ ಕುರಿತ ಫೇಸ್‍ಬುಕ್ ಲೈವ್ ಮೂಲಕ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಸಭೆ ನಡೆಸಿ ಅದರ ತೀರ್ಮಾನದಂತೆ ಜಿಲ್ಲೆಗೆ ಸಂಪರ್ಕ ಹೊಂದಿರುವಂತಹ ಅಂತರ ಜಿಲ್ಲಾ ಚೆಕ್‍ಪೋಸ್ಟ್‍ಗಳನ್ನು ಮತ್ತೆ ತೆರೆಯಲಾಗಿದೆ. ಅಂತರ ರಾಜ್ಯ ಚೆಕ್‍ಪೋಸ್ಟ್ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲಿದೆ. ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಗಡಿಗಳಲ್ಲಿ ಚೆಕ್‍ಪೋಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಅನಗತ್ಯವಾಗಿ ಜಿಲ್ಲೆ ಒಳಗೆ ಬರುವಂತವರ ಹಾಗೂ ಜಿಲ್ಲೆಯಿಂದ ಹೊರ ಹೋಗದೆ ಇರುವ ಹಾಗೆ ನೋಡಿಕೊಳ್ಳುವುದು, ಅತಿ ಹೆಚ್ಚಿನ ತುರ್ತು ಪರಿಸ್ಥಿತಿಯ ಸಂರ್ದಭದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚೆಕ್‍ಪೋಸ್ಟ್‍ಗಳನ್ನು ಪ್ರಾರಂಭಿಸಲಾಗಿದೆ ಎಂದರು.

ತಮಿಳುನಾಡಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದರಿಂದ ಪಾಲಾರ್ ಹಾಗೂ ನಾಲ್ ರೋಡ್ ಚೆಕ್‍ಪೋಸ್ಟ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಂತರ ರಾಜ್ಯ ಪ್ರಯಣಿಸಲು ಸೇವಾಸಿಂಧುವಿನ ಮೂಲಕ ಹೆಸರನ್ನು ನೊಂದಾಯಿಸಿಕೊಂಡು ಬಂದವರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಬೇಕಿದೆ.  ಜಿಲ್ಲೆಯಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಹೋಗುವ ವರ್ತಕರು, ವಾಹನ ಚಾಲಕರು, ಸರಕು ಸಾಗಣೆ ಮಾಡುವವರು ಜಿಲ್ಲೆಗೆ ಹಿಂದಿರುಗಿದಾಗ 3 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ. ಇದಕ್ಕೆ ಒಪ್ಪಿದರೆ ಮಾತ್ರ ಅನುಮತಿಸಲಾಗುತ್ತದೆ ಒಪ್ಪದಿದ್ದಲ್ಲಿ ಅವರು ಅಲ್ಲೆ ಇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲೆಯ ಪ್ರೇಕ್ಷಣಿಯ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಇಂದಿನಿಂದ ಪ್ರವೇಶ ನಿರ್ಬಂಧನೆ ಮಾಡುವುದು ಸೂಕ್ತವೆಂದು ಪರಿಗಣಿಸಿ ನಿಷೇಧಿಸಲಾಗಿದೆ. ಜಿಲ್ಲೆಯ ಜನರ ಆರೋಗ್ಯ, ಸುರಕ್ಷತೆ ನೋಡಿಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ನೂರು ಹಾಸಿಗೆಯುಳ್ಳ ಕೋವಿಡ್ ಆಸ್ವತ್ರೆ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿದೆ. ಇದರಲ್ಲಿ 38 ಐ.ಸಿ.ಯು ಬೆಡ್ ವ್ಯವಸ್ಥೆ ಮಾಡಲಾಗಿದೆ.  ಕೋವಿಡ್ ಸೋಂಕಿನ ಲಕ್ಷಣಗಳು ಕಡಿಮೆ ಇರುವವರನ್ನು ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಿ ಸ್ವಲ್ಪದಿನಗಳ ನಿಗಾವಣೆ ನಂತರ ಬಳಿಕ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಜೊತೆಗೆ ಜಿಲ್ಲೆಯ ಎರಡು ಖಾಸಗಿ ಆಸ್ವತ್ರೆಯಾದ ಬಸವ ರಾಜೇಂದ್ರ ಆಸ್ವತ್ರೆಯ ಹಾಗೂ ಕಾಮಗೆರೆಯ ಹೋಲಿ ಕ್ರಾಸ್ ಆಸ್ವತ್ರೆಯಲ್ಲಿ ತಲಾ ನೂರು ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ, ಒಟ್ಟು 400 ಹಾಸಿಗೆ ಲಭ್ಯವಾಗಲಿದೆ. ನಗರದ ಜೆ.ಎಸ್.ಎಸ್. ಆಸ್ವತ್ರೆಯನ್ನು ಸಹ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಒಪ್ಪಂದಮಾಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅನುಮತಿ ಸಿಕ್ಕಿದಲ್ಲಿ ಆಸ್ವತ್ರೆ ಬಳಸಿಕೊಳ್ಳುವ ಅವಕಾಶ ಸಿಗಲಿದೆ ಎಂದರು.

ಜಿಲ್ಲೆಯಲ್ಲಿರುವ ಗಂಟಲು ದ್ರವ ಪ್ರಯೋಗಾಲಯದ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿರುವುದರಿಂದ ಪ್ರಯೋಗಾಲಯದ ಕಾರ್ಯವನ್ನು ಸ್ಥಗಿತಗೊಳಿಸಿ, ಜಿಲ್ಲೆಯಲ್ಲಿ ಸಂಗ್ರಹಿಸಿರುವ ಗಂಟಲು ದ್ರವದ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಜೂನ್ 28, 29 ಹಾಗೂ 30ರ ಸ್ಯಾಂಪಲ್ಸ್‍ಗಳನ್ನು ಕಳುಹಿಸಿಕೊಡಲಾಗಿತ್ತು. ಇಂದಿನಿಂದ ಜಿಲ್ಲೆಯ ಪ್ರಯೋಗಾಲಯವು ಮತ್ತೆ ಕಾರ್ಯರಂಭ ಮಾಡಿದೆ. ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ಜೋನ್‍ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಂಕಿತರಿಂದ ಪ್ರಾಥಮಿಕ, ದ್ವಿತೀಯ, ಹಾಗೂ ಇರುವಂತವರ ಗಂಟಲು ದ್ರವದ ಪರೀಕ್ಷೆಗಾಗಿ ಮೊಬೈಲ್ ಸ್ವ್ಯಾಬ್ ಕಲೆಕ್ಷನ್ ಯೂನಿಟ್‍ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರು, 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಬಾಣಂತಿಯರಿಗೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ. ಇಂತಹ ಪರೀಕ್ಷೆಗಳು ಸಹ ಹೆಚ್ಚು ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

 ಸಾರ್ವಜನಿಕರು ಅವಶ್ಯಕವಾದ ಔಷಧಿ ಕೊಳ್ಳಲು ಮಾತ್ರ ಬನ್ನಿ, ಅನಗತ್ಯವಾಗಿ ಕಚೇರಿ ಕೆಲಸಗಳಿಗೆ ಬರುವುದು, ಇತರೆ ಕಾರ್ಯಗಳಿಗಾಗಿ ಓಡಾಡುವುದನ್ನು ನಿಲ್ಲಿಸಬೇಕು. ಶುಭ ಕಾರ್ಯಗಳಲ್ಲಿ ಹೆಚ್ಚು ಜನರು ಸೇರಬಾರದು, ಮುಂದೆ ಬರಲಿರುವ ಒಂದಷ್ಟು ಸಂಕಷ್ಟದ ದಿನಗಳಾಗಿರುವುದರಿಂದ ಆರೋಗ್ಯದ ದೃಷ್ಠಿಯಿಂದ ಇಂತಹ ಕಾರ್ಯಕ್ರಮಗಳನ್ನು ಮುಂದೂಡಿ ಜಿಲ್ಲಾಡಳಿತದ ಜೊತೆ ಸಹಕರಿಸಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೆಸರ್ ಬಳಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮನವಿ ಮಾಡಿದರು.