ಬೆಂಗಳೂರು : ವಿಶ್ವವಿದ್ಯಾಲಯಗಳು, ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರಿಗೆ ಭರ್ಜರಿ ಸಿಹಿಸುದ್ದಿ, 2016 ರ ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಯುಜಿಸಿ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯುಜಿಸಿಯ 7 ನೇ ವೇತನಾ ಆಯೋಗದ ಶಿಫಾರಸಿನಂತೆ ಸರಾಸರಿ ಶೇ. 22 ರಿಂದ 28 ರಷ್ಟು ವೇತನ ಪರಿಷ್ಕರಣೆಯಾಗಿದೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಫೆ. 8 ರಂದು ಮಂಡಿಸಿದ ಬಜೆಟ್ ನಲ್ಲಿ ಸರ್ಕಾರಿ/ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ತತ್ಸಮಾನ ವೃಂದಗಳ ವೇತನ ಭತ್ಯೆಗಳನ್ನು ಕೇಂದ್ರದ 7 ನೇ ವೇತನ ಆಯೋಗದ ಶಿಫಾರಸುಗಳನ್ವಯ ಪರಿಷ್ಕರಿಸಲಾಗುವುದು ಎಂದು ಘೋಷಿಸಿದ್ದರು.

ಅದರಂತೆ, ಕಳೆದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಪ್ರಸ್ತಾವಕ್ಕೆ ಅನು ಮೋದನೆ ನೀಡಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.