ಚಿತ್ರದುರ್ಗ: ಕೊರೊನಾ ಹಿನ್ನೆಲೆಯಲ್ಲಿ ಯೂರಿಯಾ ಉತ್ಪಾದನೆ, ಸಾಗಾಟದಲ್ಲಿ ವ್ಯತ್ಯಯ ಹಾಗೂ ಮಳೆ ಅಧಿಕವಾಗಿರುವುದರಿಂದ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಿದ್ದು ಕಾಳಸಂತೆಯಲ್ಲಿ ಅಧಿಕ ದರದಲ್ಲಿ ಮಾರಾಟವಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಿಶಿಕಲಾ ಸುರೇಶ್‍ಬಾಬು ತಿಳಿಸಿದರು.

 ಅವರು (ಆ.12) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜುಲೈ ಅಂತ್ಯದ ಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು ಅನೇಕ ರೈತರು ಅಧಿಕ ದರದಲ್ಲಿ ಖರೀದಿಸಿ ಬೆಳೆಗಳಿಗೆ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಇದಕ್ಕೆ ಕಡಿವಾಣ ಹಾಕಿ, ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಯೂರಿಯಾ ಗೊಬ್ಬರ ಸಿಗುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

 ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ ಸಹ ನಿಮ್ಮ ಕೆಳಗಿನ ಹಂತದ ಅನುಷ್ಟಾನಾಧಿಕಾರಿಗಳು ಸಕಾಲಕ್ಕೆ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ನೀವು ಸಹ ಜವಾಬ್ದಾರರಾಗಿದ್ದು ನಿಮಗಿರುವ ಅಧಿಕಾರವನ್ನು ಚಲಾಯಿಸಿ ಕೆಳಗಿನ ಹಂತದ ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.

 ಜಂಟಿ ಕೃಷಿ ನಿರ್ದೇಶಕರು ಸಭೆಯಲ್ಲಿ ಮಾತನಾಡಿ ಯೂರಿಯಾ ಬೇಡಿಕೆ ಹೆಚ್ಚಿದ್ದು ಇಂದು 100 ಮೆಟ್ರಿಕ್ ಟನ್ ಯೂರಿಯಾ ಬಂದಿದೆ. ಇನ್ನೆರಡು ದಿನಗಳಲ್ಲಿ 500 ಮೆಟ್ರಿಕ್‍ಟನ್ ಹಾಗೂ ಮುಂದಿನ ಒಂದು ವಾರದಲ್ಲಿ 1 ಸಾವಿರ ಮೆಟ್ರಿಕ್ ಟನ್ ಯೂರಿಯಾ ಜಿಲ್ಲೆಗೆ ಬರಲಿದ್ದು ಬಹುತೇಕ ಕೊರತೆ ನಿವಾರಣೆಯಾಗಲಿದೆ ಎಂದರು.