ಚಿತ್ರದುರ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾರವರು ಮಾ.27 ರಂದು ಚಿತ್ರದುರ್ಗಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೭ ರಂದು ಮಧ್ಯಾಹ್ನ ೧೨-೩೦ ಕ್ಕೆ ಸಿರಿಗೆರೆಗೆ ಆಗಮಿಸಿ ಅಮಿತ್‌ಷಾ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಅರ್ಧ ಗಂಟೆಗಳ ಕಾಲ ಸ್ವಾಮಿಜಿಯವರೊಂದಿಗೆ ಚರ್ಚಿಸಿ ನಂತರ ೧-೩೦ ಕ್ಕೆ ಚಿತ್ರದುರ್ಗಕ್ಕೆ ಆಗಮಿಸಿ ಮುರುಘಾಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆರಳುವರು. ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಬಳಿಕ ಚಿತ್ರದುರ್ಗಕ್ಕೆ ಆಗಮಿಸುವ ಅಮಿತ್‌ಷಾರವರು ಮದಕರಿನಾಯಕ ಹಾಗೂ ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶವನ್ನು ಮಧ್ಯಾಹ್ನ ೩ ರಿಂದ ನಾಲ್ಕು ಗಂಟೆಯವರೆಗೆ ರೆಡ್ಡಿ ಸಮುದಾಯ ಭವನದಲ್ಲಿ ನಡೆಸಿ ಬೂತ್ ಮಟ್ಟದ ಪ್ರಚಾರಕರಿಂದ ಮಾಹಿತಿ ಪಡೆಯಲಿದ್ದಾರೆ. ಮೂರು ಜಿಲ್ಲೆಗಳಿಂದ ಸುಮಾರು ಒಂದುವರೆ ಸಾವಿರ ಕಾರ್ಯಕರ್ತರು ಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಜೆ ಐದು ಗಂಟೆಗೆ ಚಳ್ಳಕೆರೆಯಲ್ಲಿ ನಡೆಯುವ ಬಿಜೆಪಿ ಎಸ್.ಟಿ.ಸಮಾವೇಶದಲ್ಲಿ ಭಾಗವಹಿಸಲಿರುವ ಅಮಿತ್‌ಷಾ ನಂತರ ಬಳ್ಳಾರಿಯ ಜಿಂದಾಲ್ ಏರ್‌ಪೋರ್ಟ್ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರವಾಸದ ಮಾಹಿತಿ ನೀಡಿದರು.
ಎಸ್.ಟಿ.ಸಮಾವೇಶದಲ್ಲಿ ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ಗದಗ ಜಿಲ್ಲೆಗಳಿಂದ ಸುಮಾರು ಐವತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಯಾವುದೇ ಯೋಜನೆಗಳು ಪೂರ್ಣವಾಗಿಲ್ಲ. ಸಾರ್ವಜನಿಕರ ಅಪೇಕ್ಷೆಯಂತೆ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಭದ್ರಾಮೇಲ್ದಂಡೆ ಯೋಜನೆ ಇನ್ನು ಜಾರಿಗೆ ಬರುವುದು ಅನುಮಾನ, ರೈಲು ಮಾರ್ಗದಿಂದ ಜಿಲ್ಲೆ ವಂಚಿತವಾಗಿದೆ. ಎಸ್.ಸಿ., ಎಸ್.ಟಿ. ಹಿಂದುಳಿದವರೆ ಜಾಸ್ತಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿ ಕಡೆ ಮುಖ್ಯಮಂತ್ರಿಗಳು ಗಮನ ನೀಡಿಲ್ಲ.ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಬೇಕೆಂಬ ಆಶಯವನ್ನಿಟ್ಟುಕೊಂಡಿರುವ ಅಮಿತ್‌ಷಾರವರು ಎರಡನೆ ಬಾರಿ ಚಿತ್ರದುರ್ಗ ಜಿಲ್ಲೆಗೆ ಆಗಮಿಸುತ್ತಿರುವುದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ ಎಂದರು.
ತುಮಕೂರಿನಲ್ಲಿ ನಡೆಯುವ ಗೊಲ್ಲ ಸಮಾವೇಶಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದಲೂ ಯಾದವರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚುನಾವಣಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್, ಕೆ.ಟಿ.ಕುಮಾರಸ್ವಾಮಿ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಸಿದ್ದೇಶ್‌ಯಾದವ್, ಮಾಜಿ ಶಾಸಕ ಪಿ.ರಮೇಶ್, ನಾಗರಾಜ್‌ಬೇಂದ್ರೆ, ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು..