ಚಿತ್ರದುರ್ಗ ಐತಿಹಾಸಿಕ ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಮುರುಘಾಮಠದಲ್ಲಿ ಸಡಗರ-ಸಂಭ್ರಮ ಮೈದೆಳೆದು ಎಲ್ಲಿ ನೋಡಿದಲ್ಲಿ ಜನಸಾಗರವೇ ತುಂಬಿಹೋಗಿತ್ತು. ಕಳೆದ ಅಕ್ಟೋಬರ್ ೧೩ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಶರಣಸಂಸ್ಕೃತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು.
ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾಮಠದ ಶೂನ್ಯಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಶ್ರೀಗಳು ರುದ್ರಾಕ್ಷಿ ಕಿರೀಟಧಾರಣೆ ಮಾಡಿ, ಸರಳವಾಗಿ ಪೀಠಾರೋಹಣ ಮಾಡಿದರು.

ಶ್ರೀಮುರುಘಾಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಶ್ರೀಮಠದ ಕರ್ತೃ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಿಸಿ, ಚಿನ್ನದ ಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ, ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನಿಡಿದುಕೊಂಡು ಪೀಠಾರೋಹಣ ಮಾಡಿದರು. ಈ ಸಂಧರ್ಭದಲ್ಲಿ ನಾಡಿನ ಹರಗುರುಚರಮೂರ್ತಿಗಳು, ಸಾಧಕರು, ಭಕ್ತರು, ಉತ್ಸವ ಸಮಿತಿ ಅಧ್ಯಕ್ಷರು, ಕಾರ್‍ಯಧ್ಯಕ್ಷರು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಶಾಲಾಕಾಲೇಜುಗಳ ಮುಖ್ಯಸ್ಥರುಗಳು, ನೌಕರ ವರ್ಗದವರು, ಅಪಾರ ಸಂಖ್ಯೆಯ ಜನ ಸಮೂಹ ಜಯಘೋಷಣೆಗಳೊಂದಿಗೆ ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣವನ್ನು ವೀಕ್ಷಿಸಿದರು. ವಿವಿಧ ಕಲಾತಂಡಗಳು ಶ್ರೀಮಠದ ಆವರಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಸರದಿ ಸಾಲಿನಲ್ಲಿ ನಿಂತು ಶೂನ್ಯಪೀಠಾರೋಹಣ ವೀಕ್ಷಣೆ ಮಾಡಿ, ಶರಣರಿಗೆ ಫಲಪುಷ್ಪ ಕಾಣಿಕೆಗಳನ್ನು ನೀಡಿ ಆಶೀರ್ವಾದ ಪಡೆದು ಧನ್ಯತಾಭಾವ ಮೆರೆದರು.