ಚಿತ್ರದುರ್ಗ : ಬಸವಕೇಂದ್ರ ಶ್ರೀಮುರುಘಾಮಠ ಹಾಗು ಎಂ.ಸಿ.ಕೆ.ಎಸ್. ಕರ್ನಾಟಕ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿರುವ ಐತಿಹಾಸಿಕ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಡಾ. ಶಿವಮೂರ್ತಿ ಮುರುಘಾ ಶರಣರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಪೂರ್ವಜರು ಕಲ್ಯಾಣಿಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ದಾರೆ. ಅವು ನೀರು ದಾನಿಗಳು, ಅವು ಆಕರ್ಷಕವಾಗಿದ್ದು ವಾತಾವರಣಕ್ಕೆ ಒಂದು ಸೊಬಗು. ಹಕ್ಕಿಪಕ್ಷಿಗಳಿಗೆ ಮಾನವನ ದೈನಂದಿನ ಬದುಕಿಗೆ ಬೇಕಾಗುವ ಅವಶ್ಯಕತೆಗಳನ್ನು ಪೂರೈಸುತ್ತವೆ. ಪುಷ್ಕರಣಿ ಕಲ್ಪನೆ ಅತ್ಯಂತ ಸೊಬಗಿನಿಂದ ಕೂಡಿದ ಪರಿಕಲ್ಪನೆ. ರಾಜ ಮಹಾರಾಜರ ಕಾಲದಿಂದ ಇವು ನಿರ್ಮಾಣ ಹಂತ ತಲುಪಿದವು. ನಂತರ ಬಾವಿಗಳು ಹೆಚ್ಚು ಜನಪ್ರಿಯ. ಇತ್ತೀಚೆಗೆ ಬೋರ್‍ವೆಲ್‍ಗಳು ಬಂದಿವೆ. ಬೋರ್‍ವೆಲ್‍ನಷ್ಟು ಆಳವಾಗಿ ಪುಷ್ಕರಣಿ ಹೋಗುವುದಿಲ್ಲ. ಕೊಳವೆಬಾವಿ ಕೊರೆಸುವ ತೀವ್ರತೆ ಹೆಚ್ಚಾಗಿ ಅಂತರ್ಜಲ ಕುಸಿತದಿಂದಾಗಿ ನೀರಿಲ್ಲದಂತಾಗಿವೆ. ಆದರೆ ಪುಷ್ಕರಣಿಗಳು ಹಾಗಾಗುವುದಿಲ್ಲ. ಅವುಗಳಿಗೆ ಕಾಯಕಲ್ಪ ಕೊಡಬೇಕು. ಹೂಳೆತ್ತುವ ಕೆಲಸ ಆಗಬೇಕು. ಅದರಲ್ಲಿ ಬಿದ್ದಿರುವ ಕಸವನ್ನು ತೆಗೆಯುವುದರಿಂದ ಅದರಲ್ಲಿ ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಬೋರ್‍ವೆಲ್ ಕೊರೆಸುವುದನ್ನು ತಪ್ಪಿಸಬೇಕು. ಬೋರ್‍ವೆಲ್‍ಗಳ ಹತ್ತಿರ ನೀರನ್ನು ಹಿಂಗಿಸುವ ಅಥವಾ ಮರುಪೂರಣ ಯೋಜನೆ ಮಾಡಲಾಗಿದೆ ಎಂದರು.

ಈ ಪುಷ್ಕರಣಿಯು ಹದಿನೆಂಟನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಇಲ್ಲಿ ಸಿಕ್ಕಿರುವ ಶಾಸನದಲ್ಲಿ ವೀರಪ್ಪ ಎನ್ನುವ ಹೆಸರಿದ್ದು, ಇವರು ಈ ಪುಷ್ಕರಣಿಯನ್ನು ಕಟ್ಟಿಸಿರಬಹುದು ಎಂದು ಹೇಳಲಾಗಿದೆ.
ಎಂ.ಸಿ.ಕೆ.ಎಸ್. ಕರ್ನಾಟಕ ಫೌಂಡೇಶನ್‍ನ ಟ್ರಸ್ಟಿ ಶ್ರೀಮತಿ ಶೀಲಾ ಮಾಧವನ್ ಮತ್ತು ತಂಡದವರು, ಶ್ರೀ ಬಸವ ಕಿರಣ ಸ್ವಾಮಿಗಳು, ಶ್ರೀ ಬಸವ ಪ್ರಜ್ಞಾನಂದ ಸ್ವಾಮಿಗಳು, ಮುರುಗೇಶ್, ಎ.ಜೆ. ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ ಮೊದಲಾದವರಿದ್ದರು.