ಚಿತ್ರದುರ್ಗ: ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಗುಂಡೇಟು ತಿಂದ ಪಾಕಿಸ್ತಾನದ ಬಾಲಕಿ ಮಲಾಲ, ಬಾಂಗ್ಲಾದೇಶದ ಲೇಖಕಿ ತಸ್ಲಿಮ ನಸ್ರಿನ್ ಇವರುಗಳು ಮಹಿಳಾ ಲೋಕಕ್ಕೆ ಸ್ವಾತಂತ್ರ ತಂದುಕೊಟ್ಟ ಆಧುನಿಕ ಜಗತ್ತಿನ ನಾರಿಯರು ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.
ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಸಹನಾ ಮಾತೃಶ್ರೀ ಸಂಸ್ಥೆಯ ೧೮ ನೇ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬರವಣಿಗೆ ಮೂಲಕ ಮಹಿಳೆಯರ ಹಕ್ಕನ್ನು ಪ್ರತಿಪಾದಿಸಿದ ತಸ್ಲಿಮ ನಸ್ರೀನ್‌ಳನ್ನು ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಯಿತು. ಭಯೋತ್ಪಾದಕರ ಗುಂಡಿನ ದಾಳಿಯನ್ನು ಎದುರಿಸಿದಾಗ ಅವರ ತಂದೆ ಮಲಾಲಳನ್ನು ಬ್ರಿಟನ್‌ಗೆ ಕರೆದುಕೊಂಡು ಹೋಗಿ ಕೆಲವು ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದರು. ಗುಂಡೇಟು ತಿಂದವರಿಗೆ ಪಾಶ್ಚಿಮಾತ್ಯ ದೇಶಗಳು ಆಶ್ರಯ ನೀಡುತ್ತಿವೆ ಎಂದರು.
ಆಯ್ದಕ್ಕಿ ಲಕ್ಕಮ್ಮ ಉಜ್ವಲವಾದ ಬದುಕು ನಡೆಸಿದರು. ಮಹಿಳೆ ತನ್ನಲ್ಲಿರುವ ದಿವ್ಯ ಶಕ್ತಿಯನ್ನು ಹೊರಗಡೆ ಪ್ರದರ್ಶಿಸಬೇಕಾದರೆ ಹಾದಿ ಬೇಕು. ಗನ್‌ಗಳನ್ನು ಎಲ್ಲಾ ಸಂದರ್ಭಗಳಲ್ಲಿ ಬಳಸಲು ಆಗುವುದಿಲ್ಲ. ಆದರೆ ಪೆನ್ನನ್ನು ಯಾವ ಸಂದರ್ಭದಲ್ಲಿಯಾದರೂ ಬಳಸಿ ಬರವಣಿಗೆ ಮೂಲಕ ಭಾವನೆ, ಚಿಂತನೆ, ಆಲೋಚನೆಗಳನ್ನು ಹೊರಹಾಕಬಹುದು. ಅಮೇರಿಕಾ ವೈಟ್‌ಹೌಸ್ ಎದುರು ಲೆಬೆನಾನ್‌ನ ಮುದುಕಿಯೊಬ್ಬಳು ಗಾಂಧಿ ಫೋಟೋ ಇಟ್ಟುಕೊಂಡು ಯುದ್ದ ಬೇಡ. ಶಾಂತಿ ಬೇಕು ಎಂದು ಹದಿನೆಂಟು ವರ್ಷಗಳ ಕಾಲ ಏಕಾಂಗಿ ಧರಣಿ ನಡೆಸಿದಳು. ಹನ್ನೆರಡನೆ ಶತಮಾನದ ವಚನಗಾರ್ತಿಯರು ಅಭಿವ್ಯಕ್ತಿ ಬಳಸಿಕೊಂಡು ಮೌಢ್ಯಗಳನ್ನು ಖಂಡಿಸಿದರು. ದಿವ್ಯ ಶಕ್ತಿ ಪ್ರವೇಶಿಸಿದಾಗ ಮಾತ್ರ ಮಹಿಳೆ ದೊಡ್ಡ ಶಕ್ತಿಯಾಗಲು ಸಾಧ್ಯ ಎಂದು ಹೇಳಿದರು.
ವ್ಯವಹಾರಿಕ, ಲೌಕಿಕ ಪ್ರಜ್ಞೆ ಜೊತೆ ಸಾಂಸ್ಕೃತಿಕ ಪ್ರಜ್ಞೆ ಮಹಿಳೆಗೆ ಬೇಕು. ಇದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಸೃಜನಶೀಲತೆ, ಕ್ರಿಯಾಶೀಲತೆಯಿಂದ ಸ್ತ್ರೀಯರು ಅಪ್ರತಿಮ ಮಹಿಳೆಯರಾಗುತ್ತಾರೆ. ಮಹಿಳಾಶಕ್ತಿ ಜಾಗೃತವಾಗಲು ಪ್ರತಿ ವರ್ಷ ಮುರುಘಾಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಮೂರು ದಿನಗಳ ಕಾರ್ಯಾಗಾರ ಮಾಡಿ ಎಂದು ಶರಣರು ತಿಳಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಿ.ಮಂಜುಳ, ನಿವೃತ್ತ ಪ್ರಾಚಾರ್ಯರಾದ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ಮಾತನಾಡಿದರು.
ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಹನಾಮಾತೃಶ್ರೀ ಸಂಸ್ಥೆಯ ಅಧ್ಯಕ್ಷೆ ರೀನಾವೀರಭದ್ರಪ್ಪ ವಹಿಸಿದ್ದರು.
ವೀರಶೈವ ಸಮಾಜದ ಅಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ಸುಜಯಶಿವಪ್ರಕಾಶ್, ಮಂಗಳ ತಿಲಕ್ ವೇದಿಕೆಯಲ್ಲಿದ್ದರು.
ಡಾ.ಸುಧಾ ಪ್ರಾರ್ಥಿಸಿದರು. ಸುಜಯಶಿವಪ್ರಕಾಶ್ ಸ್ವಾಗತಿಸಿದರು. ಸಂಸ್ಥಾಪಕ ನಿರ್ದೇಶಕರುಗಳಾದ ನಾಗಮಣಿ ನೀಲಕಂಠಯ್ಯ, ಹೇಮಂತಿನಿ ಪ್ರಕಾಶ್, ರೋಹಿಣಿಬಸವರಾಜ್, ಭಾರತಿ ಮೃತ್ಯುಂಜಯ, ಸುಜಾತ ತಮ್ಮಣ್ಣ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.