ಚಿತ್ರದುರ್ಗ: ಯಾವುದೇ ಹುದ್ದೆಗಳನ್ನು ಪಡೆದುಕೊಂಡು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡರೆ ಯಾವ ಪ್ರಯೋಜನವಿಲ್ಲ. ಜಿಲ್ಲೆಯಾದ್ಯಂತ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ವಿಧಾನಪರಿಷತ್ ಸದಸ್ಯೆ ಜಯಮ್ಮಬಾಲರಾಜ್ ತಿಳಿಸಿದರು.

ಐ.ಎನ್.ಟಿ.ಯು.ಸಿ.ಉಪಾಧ್ಯಕ್ಷರುಗಳಾಗಿ ನೇಮಕಗೊಂಡಿರುವ ಎನ್.ಸಂತೋಷ್, ಸಿ.ಎಂ.ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಬಿ.ಮೊಹಸೀನ್ ಇವರುಗಳಿಗೆ ಕಾಂಗ್ರೆಸ್ ಕಚೇರಿಯಲ್ಲಿ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂದು ಯುವಕರು ತೋರಿಸಬೇಕಾದರೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬಲಪಡಿಸಬೇಕು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಎದುರಾಳಿ ಕೋಮುವಾದಿ ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಸುತ್ತುತ್ತಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಅವರುಗಳಿಗೆ ಸರಿಯಾದ ಪಾಠಕಲಿಸಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ಹೇಳಿದರು.

ದೇಶದ ಪ್ರಧಾನಿಯಾಗಿದ್ದ ಉಕ್ಕಿನ ಮಹಿಳೆ ಇಂದಿರಾಗಾಂಧಿ ೧೮ ನೇ ವಯಸ್ಸಿನಲ್ಲಿ ಯುವಪಡೆಯನ್ನು ಕಟ್ಟಿ ಪಕ್ಷ ಸಂಘಟನೆಗೆ ಒತ್ತು ನೀಡಿದವರು. ಅವರ ಕನಸನ್ನು ನನಸು ಮಾಡುವ ಶಕ್ತಿ ಯುವಕರ ಕೈಯಲ್ಲಿದೆ. ಪಕ್ಷಕ್ಕೆ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಎಂದಿಗೂ ಅನ್ಯಾಯವಾಗುವುದಿಲ್ಲ. ಒಂದಲ್ಲ ಒಂದು ದಿನ ಅಧಿಕಾರ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ನಾನು ವಿಧಾನಪರಿಷತ್ ಸದಸ್ಯೆಯಾಗಿರುವುದೇ ಸಾಕ್ಷಿ ಎಂದರು.

ಇಂದಿರಾಗಾಂಧಿ, ರಾಜೀವ್‌ಗಾಂಧಿ ಇವರುಗಳೆಲ್ಲಾ ಪಕ್ಷಕ್ಕಾಗಿ ತ್ಯಾಗ ಮಾಡಿ ಜೀವತೆತ್ತಿದ್ದಾರೆ. ಸೋನಿಯಾಗಾಂಧಿ ಉನ್ನತ ಹುದ್ದೆಯನ್ನು ಬೇಡವೆಂದು ಪಕ್ಷ ಸಂಘಟನೆಯ ಸಾರಥ್ಯ ವಹಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಅನೇಕ ಜನಪರ ಕೊಡುಗೆಗಳನ್ನು ಮನೆ ಮನೆಗೆ ಮುಟ್ಟಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಐ.ಎನ್.ಟಿ.ಯು.ಸಿ. ನೂತನ ಪದಾಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ಹನುಮಲಿ ಷಣ್ಮುಖಪ್ಪ, ಐ.ಎನ್.ಟಿ.ಯು.ಸಿ.ಜಿಲ್ಲಾಧ್ಯಕ್ಷ
ಸೈಯದ್‌ಸೈಫುಲ್ಲಾ, ತಾಲೂಕು ಅಧ್ಯಕ್ಷ ರಹಮತ್‌ವುಲ್ಲಾ, ಡಿ.ಕುಮಾರ್‌ಪಿಳ್ಳೆಕೆರನಹಳ್ಳಿ, ಹರ್ಷ ಆಜಾಂ, ಮುನಿರಾಜು ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.