ಪೇಶಾವರ (ಪಾಕಿಸ್ತಾನ): ಇತ್ತೀಚೆಗೆ ದುಷ್ಕರ್ಮಿಗಳಿಂದ ಧ್ವಂಸಗೊ0ಡ ಹಿಂದೂ ದೇವಾಲಯವನ್ನು ರಕ್ಷಿಸುವಲ್ಲಿ ಕರ್ತವ್ಯಲೋಪ ಎಸಗಿರುವುದಕ್ಕಾಗಿ ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವ ರಾಜ್ಯದ ಸರಕಾರವು 12ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಈ ಪೊಲೀಸ್ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂಬುದಾಗಿ ತನಿಖಾ ವರದಿಯೊಂದು ಹೇಳಿದ ಬಳಿಕ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿದೆ. ಇದೇ ಘಟನೆಗೆ ಸಂಬAಧಿಸಿ ೩೩ ಪೊಲೀಸ್ ಅಧಿಕಾರಿಗಳ ಒಂದು ವರ್ಷದ ಸೇವಾವಧಿಯನ್ನು ಸರಕಾರ ಕಡಿತಗೊಳಿಸಿದೆ.

ಖೈಬರ್ ಪಖ್ತೂನ್‌ಖ್ವ ರಾಜ್ಯದ ಕರಕ್ ಜಿಲ್ಲೆಯ ಟೆರಿ ಗ್ರಾಮದಲ್ಲಿರುವ ದೇವಸ್ಥಾನದ ಮೇಲೆ ಸ್ಥಳೀಯ ರಾಜಕೀಯ ಪಕ್ಷವೊಂದರ ನಾಯಕನ ನೇತೃತ್ವದಲ್ಲಿ ದುಷ್ಕರ್ಮಿಗಳು ಡಿಸೆಂಬರ್ 30 ರಂದು ದಾಳಿ ನಡೆಸಿದ್ದರು. ದಶಕಗಳ ಹಳೆಯ ದೇವಸ್ಥಾನ ಕಟ್ಟಡವನ್ನು ನವೀಕರಿಸಲು ಸ್ಥಳೀಯ ಹಿಂದೂ ಸಮುದಾಯವು ಸರಕಾರದಿಂದ ಅನುಮತಿ ಪಡೆದುಕೊಂಡ ಬಳಿಕ ಈ ದಾಳಿ ನಡೆದಿತ್ತು.