ಹಾಸನ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ನಡೆಯಲಿರುವ ಹಾಸನಾಂಬ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ದರ್ಶನ ನೀಡುವುದರ ಬಗ್ಗೆ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರಿಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಗೆ ಆಗಮಿಸಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನವೆಂಬರ್ 5 ರಿಂದ ನವೆಂಬರ್17 ರವರೆಗೆ ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರತಿ ವರ್ಷದಂತೆ ಈ ಬಾರಿ ಜನಜಂಗುಳಿಯೊಂದಿಗೆ ಉತ್ಸವ ಆಚರಣೆ ಕಷ್ಟ ಸಾಧ್ಯವಾಗಿದೆ ಎಂದರು.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಸಾದ್ಯ. ಪ್ರತಿ ವರ್ಷ ಆ ಅವಧಿಯಲ್ಲಿ ಲಕ್ಷಕ್ಕಿಂತ ಹೆಚ್ಚು ಜನ ದೇವಸ್ಥಾನಕ್ಕೆ ಭೆಟಿ ನೀಡುತ್ತಿದ್ದು, ಈ ವರ್ಷ ಜಾಗೃತಿಯಿಂದ ಇರಬೇಕಾಗುತ್ತದೆ ಹಾಗಾಗಿ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೋವಿಡ್ ಹಿನ್ನಲೆಯಲ್ಲಿ ಮೊದಲ ದಿನ ಹಾಗೂ ಕೊನೆಯ ದಿನ ಮಾತ್ರ ಪ್ರತಿ ವರ್ಷದಂತೆ ವಿಧಿ ವಿಧಾನಗಳ ಪ್ರಕಾರ ಸಣ್ಣ ಕಾರ್ಯಕ್ರಮ ಆಯೋಜಿಸಿ ದೇವಸ್ಥಾನ ತೆರೆಯುವಿಕೆ ಹಾಗೂ ಮುಚ್ಚುವುದಕ್ಕೆ ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಉಳಿದ ದಿನಗಳಲ್ಲಿ ದೇವಾಸ್ಥಾನದ ಸಿಬ್ಬಂದಿಗಳು ಮಾತ್ರ ಪೂಜೆ ಪುನಸ್ಕಾರ ಮಾಡುತ್ತಾರೆ. ಪ್ರಾರಂಭದಿಂದ ಅಂತ್ಯದವರೆಗೂ ದೇವರ ದರ್ಶನವನ್ನು ನಗರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶವಿರುವ ಸ್ಥಳಗಳಲ್ಲಿ ಎಲ್.ಇ.ಡಿ. ಸ್ಕ್ರೀನ್ ಮೂಲಕ ಲೈವ್ನಲ್ಲಿ ದರ್ಶನ ನೀಡಲು ನಿರ್ಧರಿಸಲಾಗಿದೆ ಎಂದು ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಹಾಜರಿದ್ದರು.
No comments!
There are no comments yet, but you can be first to comment this article.