ಚಿತ್ರದುರ್ಗ: ಹಾರ್ಮೋನ್‌ಗಳ ಅಸಮತೋಲನದಿಂದ ಮಾನವ ಕುಲ ಅಸಹಜ ಸ್ಥಿತಿಗೆ ತಲುಪುತ್ತಿದ್ದರೂ ಯಾವ ವೈದ್ಯರಾಗಲಿ, ವಿಜ್ಞಾನಿಗಳಾಗಲಿ, ವಿಶ್ವವಿದ್ಯಾನಿಲಯಗಳಾಗಲಿ ಗಂಭೀರವಾಗಿ ಚರ್ಚೆ ಮಾಡುತ್ತಿಲ್ಲದಿರುವುದೇ ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಖ್ಯಾತ ಆಹಾರ ತಜ್ಞ ಡಾ.ಖಾದರ್ ವಿಷಾಧಿಸಿದರು.

ಶ್ರೀಮತಿ ನೀಲಮ್ಮ, ಪಿ.ವಿ.ನಾಗೇಂದ್ರಪ್ಪ ಸೇವಾ ಟ್ರಸ್ಟ್, ಭಾಗ್ಯಲಕ್ಷ್ಮಿ ಮೆಡಿಕಲ್ಸ್ ಹಾಗೂ ಡಾ.ಖಾದರ್ ಅಭಿಮಾನಿಗಳ ಬಳಗದ ಸಂಯುಕ್ತಾಶ್ರಯದಲ್ಲಿ ದೇಸಿ ಆಹಾರ ಆಧುನಿಕ ರೋಗಗಳ ನಿವಾರಣೆ, ಡಯಾಬಿಟಿಸ್, ಥೈರಾಯ್ಡ್, ಪಿ.ಸಿ.ಓ.ಡಿ., ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು.

ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಮನುಷ್ಯನನ್ನು ಆವರಿಸಿಕೊಂಡರೆ ಮುಕ್ತಿಯಿಲ್ಲ. ಸಾಯುವತನಕ ಮಾತ್ರೆಗಳನ್ನು ನುಂಗುತ್ತಿರಬೇಕು ಎನ್ನುವ ಸತ್ಯ ಚಿಕ್ಕ ಮಕ್ಕಳಿಗೂ ಗೊತ್ತಾಗಿದೆ. ನೂರಕ್ಕೆ ೨೮ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ಧಾರೆ. ೪೦ ಜನ ರಕ್ತದೊತ್ತಡಕ್ಕೆ ಗುಳಿಗೆಗಳನ್ನು ನುಂಗುತ್ತಿದ್ದಾರೆ. ಹದಿನಾರು ಮಂದಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ನೂರಕ್ಕೆ ಹತ್ತು ಮಂದಿ ಪುರುಷರು, ೨೬ ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆಯಿದೆ. ರಾತ್ರಿ ವೇಳೆ ನಿದ್ದೆ ಬರುವುದಿಲ್ಲವೆಂದು ಹದಿನಾರು ಜನ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬೊಬ್ಬರಿಗೆ ಎರಡೆರಡು ರೋಗಗಳು ಕಾಡುತ್ತಿವೆ. ಇವುಗಳಿಗೆಲ್ಲಾ ರಾಸಾಯನಿಕ ಬೆರೆಸಿ ಬೆಳೆಯುತ್ತಿರುವ ಆಹಾರ ಪದಾರ್ಥಗಳ ಸೇವನೆಯ ಮುಖ್ಯ ಕಾರಣ. ಹಾಗಾಗಿ ಪ್ರತಿಯೊಬ್ಬರು ಸಿರಿಧಾನ್ಯಗಳನ್ನು ಬಳಸಿ ರೋಗದಿಂದ ದೂರವಿರಿ ಎಂದು ಸಲಹೆ ನೀಡಿದರು.

೫೦-೬೦ ವರ್ಷ ವಯಸ್ಸಿನವರಿಗೆ ಬರಬೇಕಾದ ಕಾಯಿಲೆಗಳು ಎಂಟು ವರ್ಷದ ಮಕ್ಕಳಿಗೆ ಬರುತ್ತಿದೆ. ಇದಕ್ಕೆ ಹಾರ್ಮೋನ್ಸ್‌ಗಳ ಅಸಮತೋಲನವೇ ಕಾರಣ ಎಂದು ಗೊತ್ತಾಗಿದ್ದರೂ ಯಾರು ಮಾತನಾಡುತ್ತಿಲ್ಲ. ಅಮೇರಿಕಾದಲ್ಲಿ ಹೆಣ್ಣಿನ ಮುಖದ ಮೇಲೆ ಮೀಸೆ ಬೆಳೆಯುತ್ತಿದೆ. ನಮ್ಮ ದೇಶದಲ್ಲಿಯೂ ಒಂಬತ್ತು ವರ್ಷದ ಹೆಣ್ಣು ಮಗು ಮುಟ್ಟಾಗುತ್ತಿದ್ದಾಳೆ. ಆರೋಗ್ಯವನ್ನು ಮನುಷ್ಯ ಎಂದೋ ಕಳೆದುಕೊಂಡಿದ್ದಾನೆ. ದೇಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯ ಸಿಗುವುದಿಲ್ಲ. ಅದಕ್ಕೆ ಬದಲಾಗಿ ಔಷಧಿ ಕಂಪನಿಗಳು ದುಡ್ಡು ಮಾಡಿಕೊಳ್ಳಲು ಹೊರಟಿವೆ ಎಂಬ ಜಾಗೃತಿ ಜನತೆಯಲ್ಲಿ ಮೂಡಬೇಕು ಎಂದು ಡಾ.ಖಾದರ್ ಎಚ್ಚರಿಸಿದರು.
ಒಂದು ರೋಗದಿಂದ ಮತ್ತೊಂದು ರೋಗ ಮನುಷ್ಯನ ದೇಹವನ್ನು ಆವರಿಸುತ್ತಿದೆ. ನಿಜವಾದ ಆರೋಗ್ಯ ಪಡೆಯಬೇಕಾದರೆ ಕೃತಕ ಆಹಾರಗಳನ್ನು ಕೈಬಿಡಬೇಕು. ಹುಟ್ಟುವ ಮಕ್ಕಳಿಗೆ ಆಕಳು ಹಾಲು ಉಣಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಕಾಫಿ, ಟೀ, ನೀರು ಹೀಗೆ ಎಲ್ಲವೂ ಪ್ಲಾಸ್ಟಿಕ್‌ಗಳ ಮೂಲಕ ಮಾನವನ ಬಾಯಿಗೆ ಹೋಗುತ್ತಿರುವುದರಿಂದ ಕೆಮಿಕಲ್ಸ್‌ಗಳು ದೇಹವನ್ನು ಹೊಕ್ಕು ನಾನಾ ಬಗೆಯ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಒಂದು ಲೀಟರ್ ಹಾಲು ಕರೆಯುವ ಹಸುವಿಗೆ ಇಂಜೆಕ್ಷನ್ ನೀಡಿ ಇಪ್ಪತ್ತು ಲೀಟರ್ ಹಾಲು ಕರೆಯುವಂತೆ ಮಾಡುತ್ತಿರುವ ಇಂದಿನ ಕಲಿಗಾಲದಲ್ಲಿ ಸಿರಿಧಾನ್ಯಗಳನ್ನು ಬಳಸುವವರ ಸಂಖ್ಯೆ ಹೆಚ್ಚಾದಂತೆಲ್ಲಾ ರೋಗಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಡಾ.ಖಾದರ್ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಿದರು.
ಆಯುರ್ವೇದ ವೈದ್ಯರು ಎಲೆ ಸೊಪ್ಪು ಬೇರುಗಳನ್ನು ಅರೆದು ಮಣ್ಣಿನ ಮಡಿಕೆಗಳನ್ನು ಬಳಸಿ ರೋಗಿಗಳಿಗೆ ಔಷಧಿಯನ್ನು ನೀಡುತ್ತಾರೆ. ಅದೇ ಅಲೋಪಥಿಕ್ ವೈದ್ಯರುಗಳು ಪ್ಲಾಸ್ಟಿಕ್ ಡಬ್ಬಗಳಲ್ಲಿ ಮಾತ್ರೆ ಔಷಧಿಗಳನ್ನು ನೀಡುವುದು ಕಾಯಿಲೆಗೆ ಆಹ್ವಾನವಿದ್ದಂತೆ. ಹಾರ್ಮೋನ್‌ಗಳ ಅಸಮತೋಲನದಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದು, ಪುರುಷರಲ್ಲಿ ವೀರ್ಯಾಣು ಕಣಗಳು ಕ್ಷೀಣಿಸುತ್ತಿದೆ ಎಂದರು.
ಭಾಗ್ಯಲಕ್ಷ್ಮಿ ಮೆಡಿಕಲ್ಸ್‌ನ ಎನ್.ಸುರೇಶ್‌ಬಾಬು, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಿ.ಪಾಪಣ್ಣ, ಡಿ.ಗೋಪಾಲಸ್ವಾಮಿ ನಾಯಕ, ಮಲ್ಲಿಕಾರ್ಜುನಾಚಾರ್, ಡಾ.ರಹಮತ್‌ವುಲ್ಲಾ, ಅನ್ವರ್ ಬುಕ್ ಸ್ಟಾಲ್‌ನ ಅನ್ವರ್‌ಪಾಷ ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.