ಚಿತ್ರದುರ್ಗ: ಹಣ, ಅಧಿಕಾರಕ್ಕಿಂತ ಸನ್ಮಾರ್ಗದಲ್ಲಿ ನಡೆಯುವುದರಿಂದ ಜೀವನ ಸಂತೃಪ್ತಿಯಾಗಿರುತ್ತದೆ. ಗಾಂಧಿ ಮಾರ್ಗ ಸತ್ಕಾರ್ಯದ ಮಾರ್ಗವಾಗಿತ್ತು ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.

ಬಾಪೂಜಿ-೧೫೦ ಮತ್ತು ಅಮೃತ ಮಹೋತ್ಸವ-೨೦೧೯ ಗಾಂಧಿ ಸಾಹಿತ್ಯ ಸಂಘ ಬೆಂಗಳೂರು ಇವರ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಸಿದ್ದವ್ವನಹಳ್ಳಿ ಕೃಷ್ಣಶರ್ಮ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಲು ಸಕಾರಾತ್ಮಕ ಪ್ರೇರಣೆ ಬೇಕು. ನಕಾರಾತ್ಮಕ ಪ್ರೇರಣೆಯುಳ್ಳವರು ಪಟ್ಟಭದ್ರಹಿತಾಸಕ್ತರು ಸಮಾಜಘಾತುಕ, ಲೋಕಕಂಟಕರಾಗುತ್ತಾರೆ. ಅಂತಹವರನ್ನು ಯಾರು ಬೆಳೆಸುವ ಅಗತ್ಯವಿಲ್ಲ. ಪಾರ್ಥೇನಿಯಂನಂತೆ ಹರಡಿಕೊಳ್ಳುತ್ತಾರೆ.ಅದಕ್ಕಾಗಿ ಸಕಾರಾತ್ಮಕ ಆಲೋಚನೆಯಿಂದ ಲೋಕರಕ್ಷಕರು ಸಮಾಜ ಸಂರಕ್ಷಕರನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಸಕಾರಾತ್ಮಕ ಪ್ರೇರಣೆಯಿಂದ ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಬದುಕು ಕಟ್ಟಿಕೊಂಡಿದ್ದರೆಂದರೆ ಅದಕ್ಕೆ ಗಾಂಧಿ ಪ್ರೇರಣೆಯಾಗಿದ್ದರು. ಗಾಂಧಿ ಬದುಕಿನಲ್ಲಿ ಗಟ್ಟಿ ಸೈದ್ದಾಂತಿಕತೆಯಿತ್ತು. ಭವ್ಯ ಭಾರತ ಕಟ್ಟಿಕೊಡುವ ಕನಸು ಉದ್ದೇವಿತ್ತು.ಹೃದಯ ಶ್ರೀಮಂತಿಕೆ ಮೆರೆದವರು ಗಾಂಧಿ. ಗಾಂಧಿ ಹೆಜ್ಜೆ, ನೆರಳು ಹಿಂಬಾಲಿಸಿದ ಎಷ್ಟೋ ಗಾಂಧಿಗಳು ನಮ್ಮ ದೇಶದಲ್ಲಿದ್ದಾರೆ ಎಂದರು.

ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಗಾಂಧಿಮಾರ್ಗದಲ್ಲಿ ತಮ್ಮತನ ಕಂಡುಕೊಂಡು ಗಾಂಧಿ ನಮ್ಮೊಳಗಿದ್ದಾರೆ ಎನ್ನುವುದನ್ನು ತೋರಿಸಿದ್ದಾರೆ. ಇಂತಹ ಪ್ರೇರಣೆಗಳು ವಿದ್ಯಾರ್ಥಿಗಳಿಗೆ ಜನಸಾಮಾನ್ಯರಿಗೆ ಆಗಬೇಕು. ದುರ್ಮಾಗದ ಕಡೆ ಹೋಗುವುದು ಸುಲಭ. ಸನ್ಮಾರ್ಗದ ಕಡೆ ಹೋಗುವುದು ಕಷ್ಟದ ಕೆಲಸ. ಅನೇಕ ಸವಾಲುಗಳಿಂದ ಕೂಡಿರುತ್ತದೆ. ಜೀವನದಲ್ಲಿ ಎಷ್ಟೆ ಕಷ್ಟ ಬಂದರೂ ಕೃಷ್ಣಶರ್ಮರು ಗಾಂಧಿ ಆದರ್ಶ, ತತ್ವ ಸಿದ್ದಾಂತಗಳನ್ನು ಬಿಟ್ಟುಕೊಡಲಿಲ್ಲ. ಸನ್ಮಾರ್ಗ ವ್ಯಕ್ತಿತ್ವವನ್ನು ಕಳೆದುಕೊಳ್ಳಲು ಬಿಡುವುದಿಲ್ಲ. ಗಾಂಧಿಯ ಹಾದಿ ಸನ್ಮಾರ್ಗ, ಆದರ್ಶ, ಸರಳತೆಯಿಂದ ಕೂಡಿತ್ತು ಎಂದು ಸ್ಮರಿಸಿದರು.

ಪ್ರಾಧ್ಯಾಪಕಿ ಡಾ.ಆರ್.ತಾರಿಣಿ ಶುಭದಾಯಿನಿ, ಡಾ.ಬೇ.ಗೋ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಡಾ.ಕೆ.ರಾಜೀವಲೋಚನ, ಡಾ.ಎಸ್.ಕೆ.ಶ್ರೀನಿವಾಸನ್ ವೇದಿಕೆಯಲ್ಲಿದ್ದರು.

ಗಾಂಧಿ ಸಾಹಿತ್ಯ ಸಂಘದ ಪದಾಧಿಕಾರಿಗಳು, ವಿವಿಧ ಶಾಲೆಯ ಮಕ್ಕಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.