ಚಿತ್ರದುರ್ಗ: ನಗರ ಸುಂದರವಾಗಿರಬೇಕಾದರೆ ಪ್ರತಿಯೊಬ್ಬರು ನಗರಸಭೆಯೊಂದಿಗೆ ಕೈಜೋಡಿಸಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು.

ಸ್ವಚ್ಚ ಸರ್ವೇಕ್ಷಣಾ ಅಂಗವಾಗಿ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಲ್ಲಿ ನಗರಸಭೆಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರು ತಮ್ಮ ತಮ್ಮ ಮನೆಯನ್ನು ಶುದ್ದವಾಗಿಟ್ಟುಕೊಳ್ಳುವಂತೆ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮನೆಯಲ್ಲಿನ ಕಸವನ್ನು ತಂದು ಬೀದಿಗೆ ಸುರಿಯುವ ಬದಲು ಬೆಳಗಿನ ವೇಳೆ ಪ್ರತಿ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಹಾಕಿ ಶುಚಿತ್ವವನ್ನು ಕಾಪಾಡಿ ಎಂದು ಮನವಿ ಮಾಡಿದರು.
ನಗರದಲ್ಲಿ ಗುಂಡಿ ತಗ್ಗುಗಳಿಂದ ಕೂಡಿರುವ ರಸ್ತೆಯನ್ನು ನಗರಸಭೆಯವರು ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಉದ್ಯಾನವನ, ಕ್ರೀಡಾಂಗಣ, ಆಸ್ಪತ್ರೆ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ನಗರದಲ್ಲಿರುವ ಹೊಂಡ ಹಾಗೂ ಪುಷ್ಕರಣಿಗಳಲ್ಲಿನ ಹೂಳನ್ನು ನಗರಸಭೆ ತೆಗೆಸಿದೆ. ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಯಾರು ಕಲುಷಿತಗೊಳಿಸಬಾರದು. ಸಿಹಿ ನೀರು ಎಲ್ಲರಿಗೂ ಮುಖ್ಯವಾಗಿರುವುದರಿಂದ ವ್ಯರ್ಥ ಮಾಡದೆ ಮಿತವಾಗಿ ಬಳಸಿ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಹೆಚ್.ಎನ್.ಮಂಜುನಾಥಗೊಪ್ಪೆ ಮಾತನಾಡಿ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಚ ಸರ್ವೇಕ್ಷಣಾ ಮ್ಯಾರಾಥನ್ ಓಟ ಏರ್ಪಡಿಸಿದ್ದು, ಎಲ್ಲದಕ್ಕೂ ನಗರಸಭೆಯನ್ನೇ ದೂಷಿಸುವ ಬದಲು ಸ್ವಚ್ಚತೆಗೆ ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು.

ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರುಗಳಾದ ರಾಘವೇಂದ್ರ, ತಿಪ್ಪೇಸ್ವಾಮಿ, ವೆಂಕಟೇಶ್, ಶ್ಯಾಮಲಶಿವಪ್ರಕಾಶ್, ಪೌರಾಯುಕ್ತರಾದ ಚಂದ್ರಪ್ಪ, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸರಳ, ಭಾರತಿ, ಕಾಂತರಾಜ್, ಪರಿಸರ ಇಂಜಿನಿಯರ್ ಜಾಫರ್, ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ್, ಸಹನಾ ಮಾತೃಶ್ರೀ ಸಂಸ್ಥೆ ಅಧ್ಯಕ್ಷೆ ರೀನಾವೀರಭದ್ರಪ್ಪ, ಸ್ವಚ್ಚ ಭಾರತ್ ಬ್ರಾಂಡ್ ಅಂಬಾಸಿಡರ್ ಜ್ಯೋತಿರಾಜ್, ಮಹಡಿ ಶಿವಮೂರ್ತಿ, ಜ್ಯೋತಿಲಕ್ಷ್ಮಣ್, ಸುಮಅನಂತ್, ಶೈಲವಿಶ್ವನಾಥ್, ಸುಜಾತಪ್ರಕಾಶ್ ಸೇರಿದಂತೆ ರೋಟರಿಕ್ಲಬ್, ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳು ಹಾಗೂ ಪೌರ ನೌಕರರು ಮ್ಯಾರಾಥನ್ ಓಟದಲ್ಲಿ ಭಾಗವಹಿಸಿದ್ದರು.