ಸಿರಿಗರೆ: ಹೊಲದಲ್ಲಿ ಪೈರು ಚೆನ್ನಾಗಿದೆಯೆಂದು ರೈತ ಸಂತೋಷದಲ್ಲಿರುವಾಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಇತ್ತೀಚೆಗೆ ಸೈನಿಕ ಕೀಟಬಾಧೆಯಿಂದ ಆಗಿದೆ. ರಾತ್ರೋ ರಾತ್ರಿ ಸೈನಿಕರಂತೆ ಬೆಳೆಯ ಮೇಲೆ ದಾಳಿ ನಡೆಸಿದ ಈ ಕೀಟ ಬೆಳಕು ಹರಿಯುವುದರೊಳಗೆ ಬೆಳೆದು ನಿಂತು ನಳನಳಿಸುತ್ತಿದ್ದ ಪೈರನ್ನೆಲ್ಲಾ ಬಕಾಸುರನಂತೆ ತಿಂದು ಹಾಕಿವೆ. ಹಿಂದಿನ ವರ್ಷದ ಬರದಿಂದ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದ್ದ ರೈತನಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ದಾವಣಗೆರೆಯ ಆಸುಪಾಸಿನ ನೂರು ಹಳ್ಳಿಗಳು, ಹರಪನಹಳ್ಳಿ ತಾಲ್ಲೂಕು ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಬಳ್ಳಾರಿ ಜಿಲ್ಲೆಯ ನೂರಾರು ಹಳ್ಳಿಗಳಿಗೆ ಈ ದುಸ್ಥಿತಿ ಬಂದೊದಗಿದೆ. ಈ ಸಂಕಷ್ಟವನ್ನು ಗುರುತಿಸಿರುವ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರು ನಷ್ಟದ ಅಂದಾಜಿನ ವರದಿಯನ್ನು ತಕ್ಷಣ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಕೃಷಿ ಇಲಾಖೆಯ ಆಯುಕ್ತರನ್ನು ಒತ್ತಾಯಿಸಿದ್ದಾರೆ. ವರದಿ ತಯಾರಿಸುವುದನ್ನು ಕೇವಲ ಗ್ರಾಮ ಲೆಕ್ಕಿಗರಿಗೆ ಬಿಡದೆ ಎಲ್ಲಾ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾ ಕೇಂದ್ರಗಳ ಸಿಬ್ಬಂದಿ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗೆ ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿರುವ ಮೊಬೈಲ್ ತಂತ್ರಾಂಶವನ್ನು ಬಳಸಿಕೊಂಡು ಹೇಗೆ ಮಾಡಬೇಕೆಂಬ ತರಬೇತಿಯನ್ನು ನೀಡುವುದಾಗಿಯೂ ತರಬೇತಿಯ ಪಡೆದ ನಂತರ ಅವರಿಂದ ರೈತರಿಗೆ ತರಬೇತಿ ಕೊಡಿಸಲೂ ಕೃಷಿ ಆಯುಕ್ತರು ಮುಂದಾಗಿದ್ದಾರೆ,

ರೈತರಿಂದಲೇ ಮಾಹಿತಿಯನ್ನು ಮೊಬೈಲುಗಳ ಮೂಲಕ ಪಡೆದು ಸರಕಾರಕ್ಕೆ ವರದಿ ಸಲ್ಲಿಸಲು ಆಯುಕ್ತರು ತಮ್ಮ ಆಗ್ರಹದ ಮೇರೆಗೆ ಒಪ್ಪಿದ್ದಾರೆಂದು ಶ್ರೀಗಳವರು ತಿಳಿಸಿದ್ದಾರೆ.