ಚಿತ್ರದುರ್ಗ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಕಾಲುವೆ ಮೂಲಕ ಅಜ್ಜಂಪುರ ಸಮೀಪದ ಹೆಬ್ಬೂರು ಮಾರ್ಗವಾಗಿ ವೇದಾವತಿ ನದಿ ಮೂಲಕ ವಿವಿಸಾಗರಕ್ಕೆ ಸೆಪ್ಟೆಂಬರ್ 2 ರಂದು ನೀರು ಹರಿಸಲಾಗುತ್ತಿದೆ ಎಂದು ಭದ್ರಾ ಮೇಲ್ದಂಡೆ ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್ ತಿಳಿಸಿದ್ದಾರೆ.

  ಭದ್ರಾ ಮೇಲ್ದಂಡೆ ಕಾಲುವೆ ಹೆಬ್ಬೂರಿನಿಂದ, ಕಾಟಿಗನೆರೆ,  ಬೆಣ್ಣೆ ಕುಣಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಹೆಚ್. ತಿಮ್ಮಾಪುರ, ಹನುಮನಹಳ್ಳಿ, ಕಲ್ಕೆರೆ, ಚೌಳ ಹರಿಯೂರು, ಗ್ರಾಮಗಳ ಹಳ್ಳಗಳ ಮೂಲಕ ಕುಕ್ಕೆ ಸಮುದ್ರ ಕೆರೆಯಿಂದ ವೇದಾವತಿ ನದಿಗೆ ಸೇರಿ, ನಂತರ ನದಿಪಾತ್ರದ ಹಳ್ಳಿಗಳಾದ ಚಿಕ್ಕಬಳ್ಳೆಕೆರೆ, ಬಾಗಶೆಟ್ಟಿಹಳ್ಳಿ, ಕೊರಟಕರೆ, ಬಲ್ಲಾಳ ಸಮುದ್ರ, ಮೆಟ್ಟಿನಹೊಳೆ, ಕೆಲ್ಲೂಡು, ಲಿಂಗದ ಹಳ್ಳಿ, ಕಾರೇಹಳ್ಳೀ, ಅತ್ತಿಮಗ್ಗೆ, ಬೇವಿನ ಹಳ್ಳಿ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಸೇರುತ್ತದೆ.

 ಆದ್ದರಿಂದ ಈ ಸರಹದ್ದುಗಳಲ್ಲಿ ಜನ, ಜಾನುವಾರುಗಳು ನದಿ ದಾಟುವಾದಲ್ಲಿ, ಇಳಿಯುವುದಾಗಲಿ ಮಾಡಬಾರದು. ಮತ್ತು ಯಾರೂ ಸಹ ಅನಧಿಕೃತವಾಗಿ ಈ ಮಾರ್ಗದಲ್ಲಿ ಪಂಪ್‍ಸೆಟ್ ಅಳವಡಿಸಿ ನೀರನ್ನು ಎತ್ತಬಾರದು ಎಂದು ಸೂಚನೆ ನೀಡಲಾಗಿದೆ.