ಚಿತ್ರದುರ್ಗ: ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶಾಖಾಮಠವಾದ ಚಿಂಚೋಳಿ ತಾಲ್ಲೂಕು ಸುಲೇಪೇಟೆಯ ಖಟುವಾಂಗೇಶ್ವರ ವಿರಕ್ತಮಠದ ಶ್ರೀ ಗುರುಲಿಂಗ ಸ್ವಾಮಿಗಳು (೪೮ವರ್ಷ) ಬಸವೇಶ್ವರ ಆಸ್ಪತ್ರೆಯಲ್ಲಿಂದು ಬೆಳಗಿನ ಜಾವ ಲಿಂಗೈಕ್ಯರಾದರು.

ಮೂಲತಃ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದ ಶ್ರೀಮತಿ ವೀರಮ್ಮ ಮತ್ತು ಕಲ್ಲಯ್ಯ ದಂಪತಿಗಳ ಸುಪುತ್ರರಾದ ಶ್ರೀಗಳು, ಶಾಖಾಮಠದ ಮೂಲಕ ಆ ಭಾಗದಲ್ಲಿ ಬಸವಾದಿ ಶರಣರ ತತ್ತ್ವಗಳನ್ನು ಪ್ರಚಾರ ಮಾಡುತ್ತ ಬಂದಿದ್ದರು. ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ತಲೆಗೆ ತೀವ್ರ ಪೆಟ್ಟುಬಿದ್ದು ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಎರಡು ತಿಂಗಳ ಹಿಂದೆ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ.

ಪೂರ್ವಾಹ್ನ ೧೧ ಗಂಟೆಗೆ ಸುಲೇಪೇಟೆಯ ಖಟುವಾಂಗೇಶ್ವರ ವಿರಕ್ತಮಠದಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಭಾಗವಹಿಸಲಿದ್ದು, ಬಸವತತ್ತ್ವದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ. ಕೋವಿಡ್-೧೯ ಹಿನ್ನೆಲೆಯಲ್ಲಿ ಭಕ್ತಾದಿಗಳು ಮನೆಯಲ್ಲಿದ್ದುಕೊಂಡು ಸಂತಾಪ ಸೂಚಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.