ನವದೆಹಲಿ : ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ಕೇಂದ್ರ ಸರ್ಕಾರವು ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಶೇ. 4 ರ ರಿಯಾಯಿತಿ ದರದಲ್ಲಿ ಬೆಳೆ ಸಾಲ ಪಡೆದಿರುವ ರೈತರು ದಂಡವಿಲ್ಲದೆ ಸಾಲ ಮರುಪಾವತಿಸುವ ಅವಧಿಯನ್ನು ಅ. 31 ರ ವರೆಗೆ ವಿಸ್ತರಿಸಲಾಗಿದೆ.

ರೈತರು ಮಾರ್ಚ್ 31 ರೊಳಗೆ ದಂಡ ರಹಿತವಾಗಿ ಸಾಲ ಮರುಪಾವತಿಸಬೇಕಿತ್ತು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ. 31 ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಆ. 31 ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

ಕೃಷಿ ಸಾಲಕ್ಕೆ ಶೇ. 9 ರ ಬಡ್ಡಿದರವಿದೆ. ಆದರೆ ಕೇಂದ್ರ ಸರ್ಕಾರ 3 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ. 2 ರಷ್ಟು ಬಡ್ಡಿ ರಿಯಾಯಿತಿ ನೀಡುತ್ತದೆ. ಇದರಿಂದ ರೈತರಿಗೆ ಶೇ. 7 ರ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಸಕಾಲಕ್ಕೆ ಸಾಲ ಮರುಪಾವತಿಸುವವರಿಗೆ ಇನ್ನೂ ಶೇ. 3 ರಷ್ಟು ರಿಯಾಯಿತಿ ನೀಡಲಾಗುತ್ತದೆ.