ಚಿತ್ರದುರ್ಗ: ರಾಜ್ಯದಲ್ಲಿ ಸಾಮಾಜಿಕ ಭದ್ರತಾ  ಯೋಜನೆಯಡಿ ವರ್ಷಕ್ಕೆ ರೂ. 7500 ಕೋಟಿ ಮೊತ್ತವನ್ನು  ಮಾಸಾಶನಕ್ಕಾಗಿ ಪಾವತಿ ಮಾಡಲಾಗುತ್ತಿದ್ದು, ಅರ್ಹರಿಗೆ ಮಾತ್ರ ಮಾಸಾಶನ ನೀಡುವ ಉದ್ದೇಶದಿಂದ ಫೆಬ್ರುವರಿಯಿಂದ ಬ್ಯಾಂಕ್  ಮೂಲಕವೇ ಪಾವತಿಸಲಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವರಾದ ಆರ್.ಅಅಶೋಕ ತಿಳಿಸಿದರು.

ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬೆಳೆ ಹಾನಿ ಹಾಗೂ ಕಂದಾಯ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಸಾಶನ ಪಡೆಯುತ್ತಿರುವವರ ಆಧಾರ್ ಲಿಂಕ್‍ನ್ನು ಕಡ್ಡಾಯವಾಗಿ ಅಪ್‍ಡೇಟ್ ಮಾಡಬೇಕಾಗಿದ್ದು, ಇದಾದ ನಂತರ ಬ್ಯಾಂಕ್ ಮೂಲಕ ಮಾಸಾಶನ ಪಾವತಿಸುವುದರಿಂದ ಬೇರೆ ಬೇರೆ ಸ್ಥಳಗಳಲ್ಲಿ ಮಾಸಾಶನ ಹಾಗೂ ಮರಣ ಹೊಂದಿದ್ದರು ಸಹ ಮಾಸಾಶನ ಪಾವತಿಯಾಗುತ್ತಿರುವ ಅನೇಕ ಪ್ರಕರಣಗಳನ್ನು ಗಮನಿಸಲಾಗಿದ್ದು, ಇಂತಹ ಸಮಸ್ಯೆಯನ್ನು ನಿವಾರಿಸಿ ಅದರ ಬದಲಾಗಿ ಅರ್ಹರನ್ನು ಹುಡುಕಿ ಮಾಸಾಶನ ನೀಡಲು ಇದರಿಂದ ಸಹಕಾರಿಯಾಗಲಿದೆ ಎಂದರು.

ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾಸಾಶನವನ್ನು ಅವರ ಬಿಪಿಎಲ್ ಹಾಗೂ ಆಧಾರ್ ಅಂಕಿ ಅಂಶದ ವಯಸ್ಸಿನ ಆಧಾರದ ಮೇಲೆ ಯಾವುದೇ ಅರ್ಜಿ ಇಲ್ಲದೆ ಅವರ ಮನೆ ಬಾಗಿಲಿಗೆ ಮಂಜೂರಾಗಿ ಆದೇಶವನ್ನು ತಲುಪಿಸಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು, ಈಗಾಗಲೇ ಈ ಪೈಲಟ್ ಕಾರ್ಯಕ್ರಮ ಬಳ್ಳಾರಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಫಲವೂ ಆಗಿದೆ. ಇದೇ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುತ್ತದೆ ಎಂದರು.