ಚಿತ್ರದುರ್ಗ: ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತುರುವನೂರಿಗೆ ಮಂಜೂರು ಮಾಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಈಗಿನ ರಾಜ್ಯ ಬಿಜೆಪಿ.ಸರ್ಕಾರ ನಿಪ್ಪಾಣಿಗೆ ಸ್ಥಳಾಂತರಿಸಿರುವುದನ್ನು ರದ್ದುಪಡಿಸುವಂತೆ ಈಗಾಗಲೆ ಸಾಕಷ್ಟು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಅನಿವಾರ್ಯವಾಗಿ ಬೀದಿಗಿಳಿದು ಧರಣಿ ಕುಳಿತ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮತ್ತು ಅವರ ಬೆಂಬಲಿಗರನ್ನು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಹೋಗಲು ಅವಕಾಶ ನೀಡದೆ ಪೊಲೀಸ್ ಅಧಿಕಾರಿಗಳು ಸುತ್ತುವರೆದರು.

ನಮಗೇನು ರಾಜ ಮರ್ಯಾದೆ ಕೊಡುವುದು ಬೇಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಹೋಗಲು ಅವಕಾಶ ಕೊಡಿ ಎಂದು ಶಾಸಕ ಟಿ.ರಘುಮೂರ್ತಿ ಪೊಲೀಸ್ ಅಧಿಕಾರಿಗಳನ್ನು ಕೋರಿಕೊಂಡರು ಇದಕ್ಕೆ ಯಾವ ಜವಾಬು ನೀಡದ ಪೊಲೀಸ್ ಅಧಿಕಾರಿಗಳು ಸಶಸ್ತ್ರ ಮೀಸಲು ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಿಕೊಂಡು ಧರಣಿಯ ಸ್ಥಳದಲ್ಲಿಯೇ ಕಾದು ನಿಂತಿದ್ದರು.

ಹೆಚ್ಚುವರಿ ರಕ್ಷಣಾಧಿಕಾರಿ ಮಹಾನಿಂಗ ಬಿ.ನಂದಗಾಂವಿ, ಹಿರಿಯೂರು ಡಿ.ವೈ.ಎಸ್ಪಿ.ರೋಷನ್ ಜಮೀರ್, ಸಶಸ್ತ್ರ ಮೀಸಲು ಪಡೆಯ ಡಿ.ವೈಎಸ್ಪಿ.ಹಾಗೂ ವೃತ್ತ ನಿರೀಕ್ಷಕರು ಧರಣಿನಿರತರು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಹೋಗದಂತೆ ಕಾವಲು ಕಾಯುತ್ತಿದ್ದರು.

ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಧರಣಿ ನಡೆಸುತ್ತೇವೆ. ಜಿಲ್ಲಾಧಿಕಾರಿಯನ್ನು ಕಂಡು ಮನವಿ ಸಲ್ಲಿಸಲು ಅವಕಾಶ ಕೊಡಿ ಎಂದು ಪೊಲೀಸರನ್ನು ವಿನಂತಿಸಿಕೊಂಡ ಶಾಸಕರು ತುರುವನೂರು ಹೋಬಳಿಯ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಸಕ ಸ್ಥಾನ ಹೋದರೂ ಪರವಾಗಿಲ್ಲ ಎಂದು ತುಂತರು ಮಳೆಯನ್ನು ಲೆಕ್ಕಿಸದೆ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಸಾವಧಾನದಿಂದ ಕುಳಿತು ಕೊನೆಗೆ ೨.೫೦ ಕ್ಕೆ ಧರಣಿ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೋವಿಡ್-೧೯ ಜಿಲ್ಲೆಯಲ್ಲಿ ದಿನದಿಂದ ದಿನೆ ವ್ಯಾಪಿಸುತ್ತಿರುವುದರಿಂದ ಕಡ್ಢಾಯವಾಗಿ ಮಾಸ್ಕ್‌ಗಳನ್ನು ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಧರಣಿನಿರತರನ್ನು ಹತ್ತತ್ತು ನಿಮಿಷಕ್ಕೊಮ್ಮೆ ಧ್ವನಿವರ್ಧಕದ ಮೂಲಕ ಪೊಲೀಸರು ಎಚ್ಚರಿಸುತ್ತಿದ್ದರು.