ಚಿತ್ರದುರ್ಗ: ಕಾಂಗ್ರೇಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಕುರುಬರಿಗೆ ಅನ್ಯಾಯ ಮಾಡುತ್ತಿವೆ. ಪ್ರಾಮಾಣಿಕವಾಗಿ ಮತಹಾಕಿದ್ದಕ್ಕೆ ಸಿಕ್ಕಿದ್ದು ಶೂನ್ಯಸ್ಥಿತಿ. ಶೀಘ್ರವೇ ಕುರುಬ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿ ಜೆಡಿಎಸ್‌ನಲ್ಲಿ ವಿಶ್ವನಾಥ್ ಅವರಿಗೆ ಹಾಗೂ ಕಾಂಗ್ರೇಸ್ ಯಾರಾದರು ಕುರುಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಚಿತ್ರದುರ್ಗ ಜಿಲ್ಲಾ ಹಾಲುಮತ ಮಹಾಸಭಾ ಆಗ್ರಹಿಸಿದೆ.
ಸಮ್ಮಿಶ್ರ ಸರಕಾರ ಕುರುಬರಿಗೆ ಮಾಡುತ್ತಿರುವ ಅನ್ಯಾಯವನ್ನು ಸಮಾಜ ಉಗ್ರವಾಗಿ ಖಂಡಿಸಿದ್ದು, ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕುರುಬ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ ಮಾಡಿದ್ದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಜಿ. ಜಗದೀಶ್, ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ಸಂಚಾಲಕ ಮಾಲತೇಶ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಎಂ.ಜೆ.ರಾಘವೇಂದ್ರ ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಶೇ. ೧೨% ರಷ್ಟು ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ೩೦ ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿರುವ ಕುರುಬ ಸಮಾಜಕ್ಕೆ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡುವಲ್ಲಿಯೂ ಅನ್ಯಾಯ ಮಾಡಿವೆ. ಅದರಲ್ಲಿ ಕಾಂಗ್ರೇಸ್ ಪಕ್ಷದಿಂದ ೮ ಜನ ಶಾಸಕರು ಆಯ್ಕೆಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ೨೨ ಸಚಿವರಿಗೆ ಅವಕಾಶವಿದ್ದರೂ ಈ ಚುನಾವಣೆಯಲ್ಲಿ ಮಾತ್ರವಲ್ಲದೇ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಶೇ. ೯೦% ಕುರುಬರು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಎಲ್ಲವನ್ನೂ ಬಲ್ಲ ಕಾಂಗ್ರೇಸ್ ಪಕ್ಷ ಸಮ್ಮಿಶ್ರ ಸರ್ಕಾರದಲ್ಲಿ ಕುರುಬರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದರು.
ಈ ದೆಸೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೇಸ್ ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್, ಕುಂದಗೋಳದಿಂದ ಸಿ.ಎಸ್. ಶಿವಳ್ಳಿ, ಹರಿಹರದಿಂದ ಎಸ್. ರಾಮಪ್ಪ, ಹೆಬ್ಬಾಳದಿಂದ ಭೈರತಿ ಸುರೇಶ್, ಕೆ. ಆರ್. ಪುರಂನಿಂದ ಭೈರತಿ ಬಸವರಾಜ್, ಹೊಸಕೋಟೆಯಿಂದ ಎಂ.ಟಿ.ಬಿ. ನಾಗರಾಜ್, ವರುಣದಿಂದ ಯತೀಂದ್ರ ಸಿದ್ದರಾಮಯ್ಯನವರು ಮತ್ತು ವಿಧಾನಪರಿಷತ್ ಸದಸ್ಯರುಗಳಾದ ಬೆಂಗಳೂರಿನಿಂದ ಹೆಚ್. ಎಂ. ರೇವಣ್ಣ, ಬೆಳಗಾವಿಯಿಂದ ವಿವೇಕರಾವ್ ಪಾಟೀಲ್, ಶಿವಮೊಗ್ಗದಿಂದ ಪ್ರಸನ್ನಕುಮಾರ್ ಇವರುಗಳಲ್ಲಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಿಂದ ೩ ಸಚಿವ ಸ್ಥಾನಗಳನ್ನು ನೀಡಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸಮಸ್ತ ಕುರುಬರ ಪರವಾಗಿ ಜಿಲ್ಲಾಧ್ಯಕ್ಷ ಕೆ.ಜಿ. ಜಗದೀಶ್, ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ, ಹಿರಿಯೂರಿನಿಂದ ಕಾಂತರಾಜ್ ಹುಲಿ, ಮೊಳಕಾಲ್ಮೂರು ಜಗದೀಶ್, ಹೊಳಲ್ಕೆರೆ ಶಶಿ ಕೋರಿದ್ಧಾರೆ.