ಚಿತ್ರದುರ್ಗ: ಸದಾಶಿವ ಆಯೋಗದ ವರದಿಗೆ ಸಂಬಂಧಿಸಿದಂತೆ ಲೋಕಸಭೆ ಸ್ಪರ್ಧಾಳು ತಮ್ಮ ನಿಲುವನ್ನು ಸ್ಪಷ್ಟಿಕರಿಸಿದ ನಂತರ ಯಾರಿಗೆ ಮತ ನೀಡಬೇಕಾಗುತ್ತದೆ ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂದು ಭೋವಿ ಗುರು ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಭಾನುವಾರ  ಭೋವಿ ಗುರು ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಭೋವಿ ಜನಾಂಗದ ಚಿಂತನ–ಮಂಥನ ಸಭೆಯಲ್ಲಿ ಮಾತನಾಡುತ್ತಿದ್ದರು.

ಹಾಗೇ ಸದಾಶಿವ ಆಯೋಗದ ವರದಿ ಪರವಾಗಿ ಇರುವ ಸ್ಪರ್ಧಾಳುಗಳನ್ನು ತಿರಸ್ಕರಿಸುವಂತೆ ಹೇಳಿದರಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಿಂದ ಮತದಾನ ಚಲಾವಣೆ ಕುರಿತು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುವುದು ಕಡ್ಡಾಯ ಮತದಾನಕ್ಕೆ ಮನವೊಲಿಸುವುದು ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  2000ಕ್ಕೂ ಹೆಚ್ಚು ಮತಗಟ್ಟೆಗಳಿದ್ದು, ಅದರಲ್ಲಿ 1000ಕ್ಕೂ ಹೆಚ್ಚು ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಭೋವಿ ಜನಾಂಗದ ಮತದಾರರಿದ್ದಾರೆ. ಅವರೆಲ್ಲರೂ ಮತದಾನವನ್ನು ತಪ್ಪದೆ ಮಾಡುವಂತೆ ಜಾಗೃತಿ ಮೂಡಿಸಲಾಗುವುದು ಎಂದರು.

ಸಮಾಜದ ಹಿತ ದೃಷ್ಠಿಯಿಂದ ಜನರನ್ನು ಜಾಗೃತಿಗೊಳಿಸಿ ಉದ್ಯೋಗ ಅರಸಿ ಗುಳೆ ಹೋದವರನ್ನು ಮತದಾನದ ದಿನದಂದು ಮತದಾನ ಮಾಡಲು ಕರೆಸಿಕೊಳ್ಳಲು ಸಮಿತಿ ಕೆಲಸ ಮಾಡಬೇಕು. ಮತದಾನದಿಂದ ಭೋವಿ ಜನಾಂಗದ ಹಿಂದೆ ಉಳಿಯಬಾರದು. ಪ್ರತಿಯೊಬ್ಬ ಮತದಾರ ಮತದಾನ ಮಾಡುವ ಮೂಲಕ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಮಂಗಳವಾರ ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಭೋವಿ, ಲಂಭಾಣಿ, ಕೊರಚ, ಕೊರಮ ಜನಾಂಗ ಸೇರಿದಂತೆ 99 ಜಾತಿಯ ಜನಾಂಗದವರು ಮತದಾನದ ವಿಷಯದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಒಸಿಸಿಐ ರಾಜ್ಯ ಘಟಕದ ಅಧ್ಯಕ್ಷ ಆನಂದಪ್ಪ, ಭೋವಿ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜೈ ಕುಮಾರ್, ಭೋವಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮಯ್ಯ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಡಿ.ಸಿ.ಮೋಹನ್, ಚಂದ್ರಪ್ಪ, ತಿಮ್ಮಯ್ಯ, ಕೃಷ್ಣಮೂರ್ತಿ, ಅಂಜಿನಪ್ಪ ಮಾತನಾಡಿದರು.