ಚಿತ್ರದುರ್ಗ: ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂಬುದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಎ.ಐ.ಸಿ.ಸಿ.ಅಧ್ಯಕ್ಷ ರಾಹುಲ್‍ಗಾಂಧಿ ಒಂದು ವರ್ಗದ ಒತ್ತಡ, ಒತ್ತಾಯ, ಕಪ್ಪುಬಾವುಟ ಪ್ರದರ್ಶನ ಹಾಗೂ ಸಣ್ಣ ಸಣ್ಣ ಅಹಿತಕರ ಘಟನೆಗೆ ಮಣಿದು ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ರಾಜ್ಯದ ಮುಖ್ಯಮಂತ್ರಿಗೆ ಸೂಚಿಸುತ್ತೇನೆ ಎಂದು ಹೇಳಿರುವುದನ್ನು ಭೋವಿ ಗುರುಪೀಠದ ಇಮ್ಮಡಿಸಿದ್ದರಾಮೇಶ್ವರಸ್ವಾಮಿ ತೀವ್ರವಾಗಿ ಖಂಡಿಸಿದರು.

ಭೋವಿ ಹಾಸ್ಟೆಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ರಾಜ್ಯದಲ್ಲಿ ಕಾವೇರಿ ಹಾಗೂ ಮಹದಾಯಿ ನೀರಿನ ಸಮಸ್ಯೆ ನಿವಾರಣೆಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಕಿಂಚಿತ್ತು ಮಾತನಾಡದ ಇವರುಗಳಿಗೆ ಸದಾಶಿವ ಆಯೋಗದ ವರದಿ ಬಗ್ಗೆ ಏಕೆ ಇಷ್ಟೊಂದು ಕಾಳಜಿ. ಬಿ.ಎಸ್.ಯಡಿಯೂರಪ್ಪ, ರಾಹುಲ್‍ಗಾಂಧಿ, ಮೋದಿ, ಅಮಿತ್‍ಷಾ, ಸೋನಿಯಾಗಾಂಧಿ ಇನ್ನು ಯಾರೆ ಆಗಲಿ ಸದಾಶಿವ ಆಯೋಗದ ವರದಿ ಶಿಫಾರಸ್ಸು ಕುರಿತು ಮಾತನಾಡಿದರೆ ಅವರ ಪ್ರಬುದ್ದತೆಯನ್ನು ಪ್ರಶ್ನಿಸಬೇಕಾಗುತ್ತದೆ. ವರದಿಗೆ ಶಿಫಾರಸ್ಸು ಮಾಡಲು ಹೊರಟವರು ಮೊದಲು ಗಂಭೀರವಾಗಿ ವಿಮರ್ಶೆ ಅವಲೋಕನ ಮಾಡಿಕೊಳ್ಳಲಿ ಎಂದು ಎಚ್ಚರಿಸಿದರು.
ನಮಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೂ ಮುಖ್ಯವಲ್ಲ. ನಮ್ಮ ಸಮುದಾಯದ ಹಿತ ಮುಖ್ಯ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಯಾರು ನಮ್ಮ ಅಭಿವೃದ್ದಿ ಪರ ನಿಲ್ಲುತ್ತಾರೋ ಅವರನ್ನು ಬೆಂಬಲಿಸುತ್ತೇವೆ. ಸದಾಶಿವ ಆಯೋಗದ ವರದಿಯನ್ನು ಒಂದು ವೇಳೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇ ಆದಲ್ಲಿ ಎಲ್ಲಾ ಚುನಾವಣೆಯಲ್ಲೂ ಬಹಿಷ್ಕರಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಸರಿಯಾಗಿ ಬರೆ ಎಳೆಯುತ್ತೇವೆ ಎಂದು ಸ್ವಾಮೀಜಿ ಖಾರವಾಗಿ ಪ್ರತಿಕ್ರಿಯಿಸಿದರು.
ಬ್ಯಾಕ್‍ಲಾಗ್ ಹುದ್ದೆಗಳನ್ನು ಇನ್ನು ಭರ್ತಿ ಮಾಡಲು ಆಗುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲಿಯೂ ಸರಿಯಾಗಿ ಕೆಲಸ ಆಗಿದ್ದರೆ ಮೀಸಲಾತಿ,

ಒಳಮೀಸಲಾತಿ ಕುರಿತು ಇನ್ನು ಚರ್ಚೆಯಾಗುತ್ತಿರಲಿಲ್ಲ. ಸರ್ಕಾರಕ್ಕೆ ಬದ್ದತೆ ಇಲ್ಲ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ವರದಿಯಲ್ಲಿರುವ ಸತ್ಯವನ್ನು ಮುಚ್ಚಿಡುವ ಬದಲು ಎಲ್ಲಾ ಪಕ್ಷದ ವಕ್ತಾರರು, ಅಧ್ಯಕ್ಷರು, ಮುಖ್ಯಸ್ಥರಿಗೆ ಸದಾಶಿವ ಆಯೋಗದ ವರದಿ ಬಗ್ಗೆ ಮಾತನಾಡಲು ಎರಡು ಗಂಟೆಯಾದರೂ ಸೆಮಿನಾರ್ ನೀಡಬೇಕು. ಇದ್ಯಾವುದನ್ನು ಮಾಡದೆ ಒಂದು ಕೋಟಿ ಎಂಟು ಲಕ್ಷ ಜನರಿಗೆ ಮೋಸ ಮಾಡುತ್ತಿದ್ದಾರೆ, ಇದೇ ರೀತಿ ನಮಗೆ ಪ್ರೇರಣೆ ಪ್ರಚೋದನೆ ಮಾಡುವುದಾದರೆ ಅಹೋರಾತ್ರಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ರಾಜ್ಯ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದರು.

ಸರ್ಕಾರ ಉದ್ಯೋಗದಲ್ಲಿ ನಮ್ಮವರು ಕೇವಲ ಶೇ.2 ರಷ್ಟಿದ್ದಾರೆ. ಉಳಿದಂತೆ ಶೇ.90 ರಷ್ಟು ಮಂದಿ ಖಾಸಗಿ, ಸ್ವಂತ ಉದ್ಯೋಗ, ಕುಲಕಸುಬು ಮಾಡಿಕೊಂಡು ಜೀವಿಸುತ್ತಿದ್ದಾರೆ. ಶೇ.50 ರಷ್ಟು ಉದ್ಯೋಗ ತುಂಬಿಕೊಳ್ಳಲು ಸರ್ಕಾರದಲ್ಲಿ ಅವಕಾಶವಿದೆ. ಎರಡು ಸಾವಿರ ಹುದ್ದೆಗಳಿಗೆ ಹಣಕಾಸು ಇಲಾಖೆ ಅನುಮತಿ ನೀಡಿದ್ದರೂ ಸರ್ಕಾರ ಇನ್ನು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇಷ್ಟೆಲ್ಲಾ ಅನ್ಯಾಯ ನಮ್ಮ ಸಮುದಾಯಕ್ಕೆ ಆಗುತ್ತಿದ್ದರೂ ಕೆಲವರು ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯದ ಮೇಲೆ ಒತ್ತಡ ಹಾಕುತ್ತಿರುವುದನ್ನು ನಾವು ಸಾರಾಸಗಟಾಗಿ ವಿರೋಧಿಸುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನು ಸರ್ಕಾರಕ್ಕೆ ನೀಡಿದರು.