ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ 2018 ರ ಜೂನ್ ಮತ್ತು ಜುಲೈನಲ್ಲಿ ಕಂದಾಯ ಇಲಾಖೆಗೆ ಸಕಾಲ್ ಯೋಜನೆಯಡಿ 19865 ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 18822 ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಇತರ ಇಲಾಖೆಗಳಿಗೆ ಸಕಾಲ ಯೋಜನೆಯಡಿ ಈ ಅವಧಿಯಲ್ಲಿ ಸ್ವೀಕೃತವಾದ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಜಿಲ್ಲೆಯು 10 ನೇ ಸ್ಥಾನದಲ್ಲಿದೆ ಎಂದು ಅಂಕಿಅಂಶಗಳ ಸಹಿತ ವಿವರಿಸಿದರು.
ಜಿಲ್ಲೆಯ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಧರ್ಮಪುರ, ಆದಿವಾಲ, ಕೂನಿಕೆರೆ, ಜವನಗೊಂಡನಹಳ್ಳಿ, ಬಬ್ಬೂರು, ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ಸಿದ್ದಾಪುರ, ರಾಂಪುರ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ, ಚಿಕ್ಕಜಾಜೂರು, ರಾಮಗಿರಿ, ಗಂಗಸಮುದ್ರ, ಗುಂಡೇರಿ, ಚಳ್ಳಕೆರೆ ತಾಲ್ಲೂಕಿನ ತಳಕು, ಹಿರೇಹಳ್ಳಿ, ನಗರಂಗೆರೆ, ಪರಶುರಾಂಪುರ, ನನ್ನಿವಾಳ, ಚಿತ್ರದುರ್ಗ ತಾಲ್ಲೂಕಿನ ಎ.ಕೆ.ಹಟ್ಟಿ, ಮೆದೇಹಳ್ಳಿ, ಚೋಳಗಟ್ಟ, ಜಿ.ಆರ್.ಹಳ್ಳಿ, ಭೀಮಸಮುದ್ರ, ಹೊಸದುರ್ಗ ತಾಲ್ಲೂಕಿನ ಬೆಲಗೂರು, ಶ್ರೀರಾಂಪುರ, ಅನಿವಾಳ, ಮತ್ತೋಡು ಹಾಗೂ ಬಲ್ಲಾಳಸಮುದ್ರ ಗ್ರಾಮಪಂಚಾಯಿತಿಗಳಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಜಾಗ (ನಿವೇಶನ) ತಲಾ ಎರಡು ಎಕರೆಯಷ್ಟು ಜಾಗ ಕೋರಿ ಗ್ರಾಮಪಂಚಾಯಿತಿಗಳು ಆಯಾ ತಹಶೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರಿ ಜಾಗವಿದ್ದರೆ ಕೂಡಲೇ ಮಂಜೂರಾತಿ ನೀಡುವಂತೆ, ಸರ್ಕಾರಿ ಜಾಗವಿಲ್ಲದಿದ್ದರೆ ಆಯಾ ಗ್ರಾಮಪಂಚಾಯಿತಿಗಳಿಂದಲೇ ಖರೀದಿ ಮಾಡಲು ಹಿಂಬರಹ ನೀಡುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ತಿಳಿಸಿದರು.