8ದೆಹಲಿ: ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರೆ ರಾಜ್ಯಗಳಲ್ಲಿ ರೈತರು ಬೆಳೆ ನಷ್ಟ, ಬರಗಾಲ, ಪ್ರವಾಹ ಮತ್ತು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಂಸದ ಬಿ.ಶ್ರೀರಾಮುಲು ಅವರು ರೈತರ ಏಳ್ಗೆ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದರು.
ಮೊದಲ ದಿನ ಹಲವು ಗದ್ದಲಗಳ ನಡುವೆಯೂ ಆರಂಭವಾದ ಕಲಾಪದಲ್ಲಿ ಮಹತ್ವವಾದ ಪ್ರಶ್ನೆಯನ್ನು ಎತ್ತಿದ ಸಂಸದ ಬಿ.ಶ್ರೀರಾಮುಲು ಮತ್ತು ದುಶ್ಯಂತ್ ಚೌತಾಲಾ ಅವರು, ಬರಗಾಲ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರೈತರು ಕೃಷಿ ಮಾಡುವುದು ಹೇಗೆ? ಇದರಿಂದ ರೈತರು ಜೀವಿ ಪರಿಸ್ಥಿತಿ ಶಾಸ್ತ್ರ ಅಳವಡಿಸಿಕೊಂಡು ಕೃಷಿ ಅಭಿವೃದ್ಧಿ ಪಡಿಸಿಕೊಳ್ಳುವುದು ಹೇಗೆ? ಈ ದಿಸೆಯಲ್ಲಿ ಸರ್ಕಾರ ತೊಂದರೆಗೊಳಗಾದ ರೈತರಿಗೆ ಪರಿಹಾರ ಕಲ್ಪಿಸಲು ಪರ್ಯಾಯವಾಗಿ ಸಂಶೋಧನೆ ಅಥವಾ ರೈತರ ಅಭಿವೃದ್ಧಿಗೆ ಬೀಜ, ಗೊಬ್ಬರಕ್ಕೇನಾದರೂ ಕ್ರಮ ಕೈಗೊಂಡಿದ್ದೀರಾ? ಎಂಬ ಪ್ರಶ್ನೆಗಳನ್ನು ಕೇಳಿದರು.
ಸಂಸದರು ಕೇಳಿದ ಈ ಪ್ರಶ್ನೆಗಳಿಗೆ ಕೇಂದ್ರದ ಕೃಷಿ ಸಚಿವ ಡಾ.ಸಂಜೀವ ಕುಮಾರ್ ಬಲ್ಯಾನ ಅವರು ಉತ್ತರಿಸಿದ್ದು ಹೀಗೆ:
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ತರಬೇತಿ ಸಂಸ್ಥೆಗಳು ಬರಗಾಲ, ಪ್ರವಾಹ ಪೀಡಿತ ಇನ್ನಿತರ ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸೂಕ್ತ ಸಂಶೋಧನೆ ಮತ್ತು ಅಧ್ಯಯನ ಕೈಗೊಂಡಿವೆ. ತಜ್ಞರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಕೃಷಿ ಸಂಶೋಧನ ಸಂಸ್ಥೆಯ ಪ್ರಕಾರ ಬರಗಾಲ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮಗ್ರ ಅಧ್ಯಯನ ನಡೆಸಿದ್ದೇವೆ. ಜೊತೆಗೆ ರೈತರ ಅಭಿವೃದ್ಧಿಗೆ ತುರ್ತಾಗಿ ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳನ್ನೂ ಕೈಗೊಂಡಿದ್ದೇವೆ ಎಂದರು.
ಕೇಂದ್ರ, ರಾಜ್ಯ ಮತ್ತು ಪ್ರಾಂತೀಯ ರೈತರಿಗೆ ಬೇಕಾದ ಪ್ರಾತ್ಯಕ್ಷಿಕೆ, ಸೂಕ್ತ ಮಾರ್ಗದರ್ಶನ ನೀಡಿ ಬರಗಾಲದ ಬವಣೆಯಲ್ಲೂ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸುವುದು ಹೇಗೆ? ಎನ್ನುವುದರ ಕುರಿತು ಸೂಕ್ತ ನೆರವು ಮತ್ತು ಸೌಲಭ್ಯ ನೀಡುತ್ತಿದ್ದೇವೆ. ಎಂತಹ ಕಠಿಣ ಸಂದರ್ಭಗಳಲ್ಲೂ ಕೃಷಿ ಬೆಳೆಗಳ ನಿಭಾಯಿಸುವಿಕೆಗೆ ಏನು ಕ್ರಮ ಕೈಗೊಳ್ಳಬೇಕೆನ್ನುವುದರ ಕುರಿತೂ ರೈತರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ದೇಶದ ವಿವಿಧೆಡೆ ಮುಖ್ಯ ಬೆಳೆಗಳಾದ ಭತ್ತ, ಗೋಧಿ, ಮೆಕ್ಕೆ ಜೋಳ, ಸೊರ್ಘಮ್, ಪರ್ಲ್ ಮಿಲ್ಲೆಟ್, ಚಿಕ್ ಪಿ, ಸೋಯಾಬೀನ್, ಕಬ್ಬು, ಹತ್ತಿ, ಸೆಣಬು ಇತ್ಯಾದಿ ದ್ವಿದಳ ಮತ್ತು ಏಕದಳ ಧಾನ್ಯಗಳನ್ನು ಬೆಳೆಯುವ ನೂತನ ಆವಿಷ್ಕಾರದ ವಿವರಣೆ ರೈತರಿಗೆ ತಿಳಿಯಪಡಿಸಲಾಗುತ್ತಿದೆ ಎಂದು ಉತ್ತರಿಸಿದರು.