ಚಿತ್ರದುರ್ಗ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದÀ ಅವ್ಯವಹಾರದ ಕುರಿತು ತಾಲ್ಲೂಕುವಾರು ತನಿಖೆ ಮಾಡಲು ಸಮಿತಿ ನೇಮಕ ಮಾಡಿ ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 2020-21ನೇ ಸಾಲಿನ ಜೂನ್ ಅಂತ್ಯದ ತ್ರೈಮಾಸಿಕ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿ ಮತ್ತು ಬೆಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 48 ಲಕ್ಷದ ಮೂವತ್ತು ಮೂರು ಸಾವಿರ ರೂಗಳು ಅವ್ಯವಹಾರ ಆಗಿರುವುದಾಗಿ ತನಿಖಾ ವರದಿಯಿಂದ ತಿಳಿದುಬಂದಿದ್ದು, ಕೇವಲ ಎರಡು ಪಂಚಾಯಿತಿಯಲ್ಲಿ ಇಷ್ಟು ದೊಡ್ಡ ಮೊತ್ತದ ಅವ್ಯವಹಾರ ನಡೆದಿದ್ದು, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ಎಷ್ಟು? ಇದರಿಂದ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಶೌಚಾಲಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ತಿಳಿಸಿದರು.

ಕಂಪ್ಯೂಟರ್ ದಾಖಲೆಗಳಲ್ಲಿ ಮಾತ್ರ ಶೌಚಾಲಯಗಳಿವೆ. ಆದರೆ ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಶೌಚಾಲಯಗಳ ವಾಸ್ತವ ವರದಿಯನ್ನು ಅಧಿಕಾರಿಗಳು ನೀಡಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆರೋಪಿಸಿದರು. ಶೌಚಾಲಯದಲ್ಲಿ ಹಣ ದುರುಪಯೋಗ ಮಾಡಿಕೊಂಡ ಪಿಡಿಒ ಹಾಗೂ ಸಂಬಂಧಪಟ್ಟ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಪ್ರಧಾನಿ ನರೇಂದ್ರ ಮೋದಿ ಅವರು ಕನಸಾಗಿದ್ದು, ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡುವತ್ತ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ದನಿಗೂಡಿಸಿದರು.