ಚಿತ್ರದುರ್ಗ; ಬಿಸಿ ಸುದ್ದಿ: ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೋಷಿತರ ಕಣ್ಮಣಿ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಅವರ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಜಿಲ್ಲೆಯ ರಾಜಕಾರಣಿಗಳು, ಮಠಾಧೀಶರು, ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಸಂಗೋಳ್ಳಿ ರಾಯಣ್ಣ ಸೇನೆ ಹಾಗೂ ಕುರುಬ ಸಮಾಜ ಒತ್ತಾಯಿಸಿದೆ.

ಸಂಗೋಳ್ಳಿ ರಾಯಣ್ಣ ಸೇನೆ ಮತ್ತು ಕುರುಬ ಸಮಾಜದ ಮುಖಂಡರ ನೇತೃತ್ವದಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಎಂ.ಜಯಣ್ಣ ಅವರು ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿ ವಿಶೇಷ ಪೂಜೆ, ಅಭಿಷೇಕ ನಡೆಸಿದ ಬಳಿಕ ಮುಖಂಡರು ಮಾತನಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ, ದಲಿತ ವರ್ಗದ ಏಳ್ಗಿಗೆ ತಮ್ಮ ಬದುಕನ್ನೆ ಮೀಸಲಿಟ್ಟು ಶತತ ಐದು ದಶಕಗಳ ಕಾಲ ಹೋರಾಟ ನಡೆಸಿದ ಎಂ.ಜಯಣ್ಣ ಚಿತ್ರದುರ್ಗಜಿಲ್ಲೆಯ ಹೆಮ್ಮೆಯ ನಾಯಕ ಎಂದು ಬಣ್ಣಿಸಿದರು. ಪ್ರೊ.ಬಿ.ಕೃಷ್ಣಪ್ಪ ಅವರ ಜತೆಗೂಡಿ ರಾಜ್ಯಾದ್ಯಂತ ದಲಿತ ಸಂಘರ್ಷ ಸಮಿತಿ ಸಂಘಟಿಸಿ, ಚಂದ್ರಗುತ್ತಿ ಬೆತ್ತಲೆ ಸೇವೆ, ಶೋಷಿತ ಜನರ ಮೇಲೆ ದೌರ್ಜನ್ಯ ಸೇರಿದಂತೆ ವಿವಿಧ ಮೌಢ್ಯಾಚಾರಣೆ, ಕಂದಾಚಾರ, ಅಸ್ಪಶ್ಯತೆ ವಿರುದ್ಧ ಹೋರಾಟ ನಡೆಸಿ ಅದರ ನಿರ್ಮೂಲನೆಗೆ ಶ್ರಮವಹಿಸಿದ ಮಹಾನ್ ನಾಯಕ ಎಂ.ಜಯಣ್ಣ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ನೀರು ಹರಿಸಲು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದುಕೊಂಡು ಹೋರಾಟ ನಡೆಸುತ್ತಿದ್ದಾರೆ. ಇಂದು ಜಿಲ್ಲೆಗೆ ಭದ್ರಾ ನೀರು ಹರಿಯಲು ಪ್ರಮುಖ ಕಾರಣಕರ್ತರು ಎಂ.ಜಯಣ್ಣ ಅವರು. ಒಂದು ರೀತಿ ಬಯಲುಸೀಮೆ ಭಗೀರಥ ಎಂ.ಜಯಣ್ಣ ಎಂದರೂ ತಪ್ಪಾಗಲಾರದು ಎಂದರು.

ಇಂತಹ ನಾಯಕ ಇಂದು ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದಾ ಸಮಾಜ ಸೇವೆಗೆ ಮಿಡಿಯುತ್ತಿದ್ದ ಎಂ.ಜಯಣ್ಣ ಅವರು ಶೀಘ್ರ ಗುಣಮುಖರಾಗಬೇಕು ಎಂಬುದು ಜಿಲ್ಲೆಯ ಸಮಸ್ತ ನಾಗರಿಕರ ಹಾರೈಕೆ ಆಗಿದೆ ಎಂದು ಹೇಳಿದರು.

ಕುರುಬ ಸಮಾಜದ ಹಿರಿಯ ಮುಖಂಡ ಎಂ.ವಿ.ಮಾಳೇಶಣ್ಣ ಮಾತನಾಡಿ, ಬಹುತೇಕ ಹೋರಾಟಗಾರರ ಬದುಕು ನೆಮ್ಮದಿಯಿಂದ ಇರುವುದೇ ಬಹಳ ಅಪರೂಪವಾಗಿದೆ. ಇದಕ್ಕೆ ಕಾರಣ ಅವರ ಹೋರಾಟದ ಫಲವನ್ನು ನೇರ, ಪರೋಕ್ಷವಾಗಿ ಪಡೆದ ಕೆಲ ಜನರಲ್ಲಿ ಕೃತಜ್ಞತೆ ಇಲ್ಲದಿರುವುದು ಎಂದು ಬೇಸರಿಸಿದರು.

ಈಗಲಾದರೂ ರಾಜ್ಯದ ಬಹುದೊಡ್ಡ ಹೋರಾಟಗಾರ ಎಂ.ಜಯಣ್ಣ ಅವರ ಚಿಕಿತ್ಸೆಗೆ ನಾವೆಲ್ಲರೂ ಹಣ ಸಹಾಯ ಮಾಡುವ ಮನಸ್ಸು ಬೆಳೆಸಿಕೊಳ್ಳೋಣಾ. ಈ ಮೂಲಕ ಹೋರಾಟಗಾರರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಸಂಗೋಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ.ಆನಂದ್ ಮಾತನಾಡಿ, ಐದು ದಶಕ ಶೋಷಿತರನ್ನು ಮುಖ್ಯವಾಹಿನಿಗೆ ತರಲು ತಮ್ಮ ಬದುಕನ್ನು ಮೀಸಲಿಟ್ಟ ಬಯಲುಸೀಮೆ ಭಗೀರ ಎಂ.ಜಯಣ್ಣ ಅವರ ಚಿಕಿತ್ಸೆ ವೆಚ್ಚ ಭರಿಸುವುದು ಜಿಲ್ಲೆಯ ರಾಜಕಾರಣಿಗಳ, ಅಧಿಕಾರಿಗಳ,

ಮಠಾಧೀಶರ ಹೊಣೆಗಾರಿಕೆ ಆಗಿದೆ ಎಂದು ಹೇಳಿದರು.

ನೀರಾವರಿ ಹೋರಾಟ ಸಮಿತಿ ನೇತೃತ್ವ ವಹಿಸಿಕೊಂಡು ಪತ್ರಕರ್ತರು, ರೈತರು, ಕಾರ್ಮಿಕರ ಜತೆಗೂಡಿ ಜಿಲ್ಲಾದ್ಯಂತ ಓಡಾಡಿ ಸಂಘಟನೆ ನಡೆಸಿ ಜಿಲ್ಲೆಗೆ ಭದ್ರಾ ನೀರು ಹರಿಯಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಇವರ ಋಣದಲ್ಲಿ ಜಿಲ್ಲೆಯ ಜನರಾದ ನಾವುಗಳು ಇದ್ದೇವೆ. ಅದರಲ್ಲೂ ರಾಜಕಾರಣಿಗಳು, ಮಠಾಧೀಶರು, ಅಧಿಕಾರಿಗಳು, ಬರಡು ಭೂಮಿ ನೀರಾವರಿ ಪ್ರದೇಶದ ದೊಡ್ದ ರೈತರು ಜಯಣ್ಣ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಬೇಕಾಗಿದೆ. ಜೊತೆಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇಷ್ಟಪಡದ ಸ್ವಾಭಿಮಾನ ಗುಣ ಹೊಂದಿರುವ ಅವರ ಕುಟುಂಬಕ್ಕೆ ಆತ್ಮಸೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಜೊತೆಗೆ ಜಯಣ್ಣ ಅವರ ಚಿಕಿತ್ಸೆ ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಚೆನ್ನೈ, ಬಾಂಬೆ ಸೇರಿದಂತೆ ವಿವಿಧೆಡೆ ಉನ್ನತ ಚಿಕಿತ್ಸೆ ಲಭಿಸುವ ಆಸ್ಪತ್ರೆಗಳು ಇವೆ. ಅಲ್ಲಿಗೆ ಜಯಣ್ಣ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ರಾಜಕಾರಣಿಗಳು, ಸ್ವಾಮೀಜಿಗಳು, ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಹೇಳಿದರು. ಭರಮಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ವತಿಯಿಂದ ಸ್ಪರ್ಧಿಸುತ್ತಿದ್ದ  ಎಂ.ಜಯಣ್ಣ, ತಮ್ಮ ಸಮುದಾಯದ ವ್ಯಕ್ತಿ. ಹೆಚ್.ಆಂಜನೇಯ ಅವರು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಕಾರಣ ಅವರ ಗೆಲುವಿಗೆ ಅಡ್ಡಿಯಾಗಬಾರದೆಂಬ

ಕಾರಣಕ್ಕೆ ಕ್ಷೇತ್ರ ತೊರೆದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಇಂದು ಹೆಚ್.ಆಂಜನೇಯ ಅವರ ರಾಜಕೀಯ ಪ್ರಗತಿಗೆ ಜಯಣ್ಣ ಅವರ ತ್ಯಾಗವೂ ಇದೆ. ಜಯಣ್ಣ ಅವರು ದಸಂಸ ರಾಜ್ಯ ಸಂಚಾಲಕರಾಗಿದ್ದ ವೇಳೆ ಈಗಿನ ಹಾಲಿ ಸಂಸದರಾದ ಎ.ನಾರಾಯಣಸ್ವಾಮಿ ಆನೆಕಲ್ತಾಲೂಕು ಸಂಚಾಲಕರಾಗಿದ್ದರು. ಬ್ಯಾಕ್‌ಲಾಗ್, ಮೀಸಲಾತಿ ವರ್ಗೀಕರಣ ಸೇರಿದಂತೆ ವಿವಿಧ ರೀತಿ ಜಯಣ್ಣ ಅವರು ಹೋರಾಟ ನಡೆಸಿದ ಪರಿಣಾಮ ಇಂದು ಸರ್ಕಾರಿ ನೌಕರಿಯಲ್ಲಿ ಅನೇಕರು ಸೇರಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇವರೆಲ್ಲರೂ ಜಯಣ್ಣ ಅವರ ಕುಟುಂಬಕ್ಕೆ ಬೆನ್ನೆಲುಬು ಆಗಿ ನಿಲ್ಲಬೇಕು.

ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ರಾಜ್ಯ ಪೌರ ನೌಕರರ ಸಂಘ ಸ್ಥಾಪಿಸಿ ಅದಮೂಲಕ ಹೋರಾಟ ನಡೆಸಿ ನಿಕೃಷ್ಠ ಬದುಕು ನಡೆಸುತ್ತಿದ್ದ ಪೌರಕಾರ್ಮಿಕರ ಬದುಕಿಗೆ ಸ್ವಾಭಿಮಾನ ತಂದುಕೊಟ್ಟ ಖ್ಯಾತಿ ಜಯಣ್ಣ ಅವರಿಗೆ ಸಲ್ಲುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರು ಹರಿಯಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಆದ್ದರಿಂದ ಮಾಜಿ ಸಚಿವ ಹೆಚ್.ಆಂಜನೇಯ, ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ, ಜಿಲ್ಲಾ ಸಚಿವ ಬಿ.ಶ್ರೀರಾಮುಲು ಸೇರಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಮಠಾಧೀಶರು, ಅಧಿಕಾರಿಗಳು ಒಗ್ಗೂಡಿ ಜಯಣ್ಣ ಅವರ ಆರೋಗ್ಯ ಕುರಿತುಕಾಳಜಿ ವಹಿಸಬೇಕಾಗಿದೆ ಎಂದು ಮನವಿ ಮಾಡಿದರು.ಈ ಸಂಬಂಧ ಜಿಲ್ಲಾ ನೀರಾವರಿ ಹೋರಾಟ ಸಮಿತಿ, ದಲಿತ ಪರ ಸಂಘಟನೆಗಳು ಕೂಡ ಮುಂದಾಗಬೇಕುಎಂದು ಹೇಳಿದರು.

ಕುರುಬ ಸಮಾಜದ ಯುವ ಮುಖಂಡ ಈ.ಆರ್.ಕುಮಾರ್, ನಟ ದರ್ಶನ್ ಸಂಘದ ಅಧ್ಯಕ್ಷ ರಘು, ರಾಯಣ್ಣ ಸೇನೆ ಪ್ರಮುಖರಾದ ಲಕ್ಷ್ಮೀಕಾಂತ್, ಕುಮಾರ್, ಶ್ರೀ, ಬಿ.ರಾಘವೇಂದ್ರ, ರಘು, ಕಿರಣ್ ಕುಮಾರ್, ಪ್ರಾಣೇಶ್, ಚಿದಾನಂದ, ರಂಗಸ್ವಾಮಿ ಇತರರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.