ಚಿತ್ರದುರ್ಗ: ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವ ಈ ಕಾಲಘಟ್ಟದಲ್ಲಿ ಶೈಕ್ಷಣಿಕ ವರ್ಷವನ್ನು ಯಾವಾಗ ಆರಂಭಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ, ಜಿಜ್ಞಾಸೆಗಳು ನಡೆಯುತ್ತಿದ್ದು, ಸರ್ಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು ಹೇಳಿದರು.

      ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪೂರ್ವಸಿದ್ಧತೆ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಭಾನುವಾರ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾತನಾಡಿದರು.

     ವಲಸೆ ಕಾರ್ಮಿಕರ ಮಕ್ಕಳು ತಮ್ಮ ಸ್ವಂತ ಸ್ಥಳಗಳಿಗೆ ಹೋಗಿದ್ದಲ್ಲಿ, ಅಂತಹ ಮಕ್ಕಳು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಅವರು ಇರುವ ಸ್ಥಳಗಳ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.  ಸಮಾಜಕಲ್ಯಾಣ, ಬಿಸಿಎಂ, ಮೊರಾರ್ಜಿದೇಸಾಯಿ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಿದ್ದಲ್ಲಿ, ಅಂತಹ ಮಕ್ಕಳು ಬೇರೆಡೆ ಅವರಿಗೆ ಅನುಕೂಲ ಆಗುವ ಸ್ಥಳಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.  ಸ್ಥಳ ಬದಲಾವಣೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದ್ದು, ಅವರ ಅಪೇಕ್ಷೆಯಂತೆ ಪರೀಕ್ಷಾ ಕೇಂದ್ರ ಬದಲಾಯಿಸಿ, ಅದರನ್ವಯ ಪ್ರವೇಶಪತ್ರಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.