ಚಿತ್ರದುರ್ಗ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನ ಮಾಡುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಕಳಪೆ ಕಾಮಗಾರಿಯಿಂದ ಕೂಡಿವೆ. ಕಟ್ಟಡ ನಿರ್ಮಾಣ ಸೇರಿದಂತೆ ಟ್ಯಾಂಕ್‍ಗಳನ್ನು ಅಳವಡಿಸುವುದರಲ್ಲಿಯು ನಿರ್ಲಕ್ಷ್ಯತೆ ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹೆಚ್.ಬಿ.ಸೌಭಾಗ್ಯ ಬಸವರಾಜನ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜೂನ್ ಅಂತ್ಯದವರೆಗಿನ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಶುದ್ದ ಕುಡಿಯುವ ನೀರಿನ ಘಟಕ ಅಳವಡಿಕೆಗೆ ರೂ.11.90 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಆದರೆ ಸಮಯಕ್ಕೆ ಸರಿಯಾಗಿ ಕಟ್ಟಡದ ಕ್ಯೂರಿಂಗ್ ಮಾಡುವುದಿಲ್ಲ ಮತ್ತು ಟ್ಯಾಂಕ್‍ಗಳು ಗಾಳಿ ಬಂದರೆ ಹಾರಿ ಹೋಗುವಂತಿರುತ್ತವೆ. ಖಾಸಗಿಯಾಗಿ ನಿರ್ಮಾಣ ಮಾಡಿರುವ ಡಾ; ವಾಟರ್ ಘಟಕಗಳು ರಿಪೇರಿಗೆ ಬರುವುದಿಲ್ಲ. ಆದರೆ ಸರ್ಕಾರದಿಂದ ನಿರ್ಮಾಣ ಮಾಡಿರುವ ಘಟಕಗಳು ಪದೇ ಪದೇ ರಿಪೇರಿಗೆ ಬಂದಿರುತ್ತವೆ. ಹೊಸದಾಗಿ ಅನುಷ್ಠಾನ ಮಾಡುವ ಘಟಕಗಳಿಗೆ ಐದು ವರ್ಷಗಳವರೆಗೆ ನಿರ್ವಹಣೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಕಳಪೆಯಾಗಿರುವ ಘಟಕಗಳಿಗೆ ಹಣ ಪಾವತಿಯನ್ನು ತಡೆಹಿಡಿಯಲು ತಿಳಿಸಿದರು.
ಜಿಲ್ಲೆಯಲ್ಲಿ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಬಹುತೇಕ ಘಟಕಗಳು ರಿಪೇರಿಯಲ್ಲಿವೆ. ಎಲ್ಲಾ ಘಟಕಗಳ ರಿಪೇರಿಗೆ ರೂ.68 ಲಕ್ಷವನ್ನು ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮಕ್ಕೆ ಒದಗಿಸಲಾಗಿದೆ. ಕೆ.ಆರ್.ಡಿ.ಎಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗ ಹಾಗೂ ಸಹಕಾರ ಇಲಾಖೆ ಸೇರಿ ಒಟ್ಟು 921 ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ 736 ಅನುಷ್ಠಾನವಾಗಿದ್ದ 538 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 268 ಘಟಕಗಳು ರಿಪೇರಿಯಲ್ಲಿವೆ ಎಂದರು.

ಹಾಗಾಗಿ ಅವುಗಳ ಗುಣಮಟ್ಟ ಪರಿಶೀಲಿಸಿ ಹಣ ಪಾವತಿಸುವಂತೆ ಹೇಳಿದರು.