ಚಿತ್ರದುರ್ಗ:ಪೊಲೀಸ್ ಇಲಾಖೆ ಎಂದರೆ ಅದು ಶಸ್ತಿನ ಇಲಾಖೆಯಾಗಿದ್ದು ಇಲ್ಲಿ ಎಂದಿಗೂ ಅಶಿಸ್ತು ಸಹಿಸಲಾಗದು. ಮೊದಲಿನಿಂದಲು ಇಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ; ಜಿ.ಪರಮೇಶ್ವರ್ ತಿಳಿಸಿದರು.
ಹಿರಿಯೂರು ತಾ; ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್‌ಗಳ ತರಬೇತಿ ನಿರ್ಗಮನ ಪಥ ಸಂಚಲನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಪಥಸಂಚಲನ ವೀಕ್ಷಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆ ಎಂದರೆ ಅದು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಇಲಾಖೆಯಾಗಿದೆ. ಬೇರೆ ಯಾವುದೇ ಇಲಾಖೆಯಲ್ಲಿ ಅಶಿಸ್ತು ಇರಬಹುದು, ಆದರೆ ಇಲ್ಲಿ ಮಾತ್ರ ಎಂದಿಗೂ ಅಶಿಸ್ತಿಗೆ ಅವಕಾಶವೇ ಇಲ್ಲವಾಗಿದೆ. ಈ ಬಗ್ಗೆ ಸಂವಿಧಾನದಲ್ಲಿಯೇ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಾಪಾಡುವ ಅತೀ ದೊಡ್ಡ ಜವಾಬ್ದಾರಿ ಇಲಾಖೆಯದ್ದಾಗಿರುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ತರಬೇತಿ ಪಡೆದ ಸಿಬ್ಬಂದಿಗಳು ಸಹ ಇದನ್ನು ನಿರ್ವಹಿಸಬೇಕಾಗುತ್ತದೆ ಎಂದರು.
ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಪೊಲೀಸ್ ಎಂದು ಕರೆಯುತ್ತಾರೆ. ಇಲ್ಲಿಯು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾಗಬೇಕು. ಪೊಲೀಸ್ ಬಗ್ಗೆ ಸಾಕಷ್ಟು ಟೀಕೆ, ದೂರುಗಳಿದ್ದು ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಬೇಕು. ಜನರೊಂದಿಗೆ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು. ಕಾನೂನು ರಕ್ಷಣೆ ಮಾಡುವುದು ನಿಮ್ಮ ಮೊದಲ ಕರ್ತವ್ಯವಾಗಬೇಕು. ಇದರಿಂದ ಸಮಾಜದಲ್ಲಿ ಎಲ್ಲರೂ ಶಾಂತಿಯಿಂದ ಬಾಳುತ್ತಾರೆ ಎಂದರು.
ಸಮಾರಂಭದಲ್ಲಿ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಾದ ಶರಶ್ಚಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ, ವಿಧಾನಪರಿಷತ್ ಸದಸ್ಯೆ ಜಯಮ್ಮ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ ಉಪಸ್ಥಿತರಿದ್ದರು. ಪೊಲೀಸ್ ಮಹಾನಿರ್ದೇಶಕರು ತರಬೇತಿ ಪಿ.ಕೆ.ಗರ್ಗ್ ಸ್ವಾಗತಿಸಿದರು. ತರಬೇತಿ ಶಾಲೆ ಪ್ರಾಂಶುಪಾಲರಾದ ಪಾಪಣ್ಣನವರು ಶಾಲೆಯ ವರದಿ ವಾಚಿಸಿದರು.