ಬೆಂಗಳೂರು : ಶಿಕ್ಷಕರ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೇರಿದಂತೆ ಒಟ್ಟಾರೆ 25,600 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಿದೆ.

12,500 ಪ್ರಾಥಮಿಕ ಮತ್ತು 3,100 ಪ್ರೌಢಶಾಲೆ ಶಿಕ್ಷಕರು ಮತ್ತು ಈಗಾಗಲೇ ನಿರ್ಧರಿಸಿರುವ 10 ಸಾವಿರ ಪದವೀಧರರು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವಾಗುವವರೆಗೂ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಪೈಕಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇರ ನೇಮಕಾತಿ ನಡೆದು ಶಾಲೆಗೆ ವರದಿ ಮಾಡಿಕೊಳ್ಳುವವರೆಗೆ ಮಾತ್ರ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಶಿಕ್ಷಕರು ವರದಿ ಮಾಡಿಕೊಂಡ ನಂತರ ತಾನಾಗಿಯೇ ಅತಿಥಿ ಶಿಕ್ಷಕರ ನೇಮಕಾತಿ ರದ್ದಾಗಲಿದೆ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ.

ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಧನ ಮಾಸಿಕ 7,500 ರು. ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ 8000 ರು. ನಿಗದಿ ಪಡಿಸಿದೆ. ನಿಗದಿಪಡಿಸುವ ವಿದ್ಯಾರ್ಹತೆಯನ್ನು ಪರಿಶೀಲಿಸಿ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಬೇಕು. ಕೊರತೆ ಇರುವ ಶಾಲೆಗಳಿಗೆ ಹೆಚ್ಚುವರಿ ಇರುವ ಶಾಲೆಗಳಿಂದ ಶಿಕ್ಷಕರನ್ನು ಕೂಡಲೇ ಮರು ನಿಯೋಜಿಸಲಾಗುತ್ತದೆ.