ಚಿತ್ರದುರ್ಗ : ಬೋಧಕರಿಗೆ ನಿಧಾನ ಕಲಿಕೆ ವಿದ್ಯಾರ್ಥಿಯನ್ನು ಬುದ್ಧಿವಂತನನ್ನಾಗಿ ಮಾಡುವುದೇ ಇಂದಿನ ದೊಡ್ಡ ಸವಾಲಾಗಿದೆ. ವಿದ್ಯಾರ್ಥಿಗಳ ಬುದ್ಧಿಮತ್ತೆಗಿಂತ ನೂರುಪಟ್ಟು ಶಿಕ್ಷಕರು ಬುದ್ಧಿವಂತರಾಗಿರಬೇಕು. ಈ ಹಂತಕ್ಕೆ ಬೋಧಕರು ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀಮುರುಘಾಮಠದಲ್ಲಿ ನಡೆದ ಎಸ್.ಜೆ.ಎಂ. ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳ ಪ್ರಾಂಶುಪಾಲರುಗಳು ಹಾಗು ಉಪನ್ಯಾಸಕರಿಗಾಗಿ ನಡೆದ ಶೈಕ್ಷಣಿಕ ಗುಣಮಟ್ಟ, ಫಲಿತಾಂಶ ಸುಧಾರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪನ್ಯಾಸಕರು ತಮ್ಮ ಎಲ್ಲ ವೈಯುಕ್ತಿಕ ಚಿಂತೆಗಳನ್ನು ಮನೆಯಲ್ಲಿ ಬಿಟ್ಟು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಬೋಧಿಸಬೇಕು. ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಜೊತೆ ಇರುವಾಗ ಹೊರಗಿನ ಯಾವ ಆಲೋಚನೆಗಳೂ ನಮ್ಮೊಳಗೆ ಸುಳಿಯಬಾರದು. ಪೋಷಕರು ತಮ್ಮ ಮಕ್ಕಳನ್ನು ಹಲವಾರು ನಿರೀಕ್ಷೆಗಳೊಂದಿಗೆ ಕಾಲೇಜಿಗೆ ಕಳುಹಿಸುತ್ತಾರೆ. ಶಿಕ್ಷಕರು ಅವರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡಬೇಕು. ವರ್ಷಕ್ಕೆ ಎರಡು ಬಾರಿಯಾದರೂ ಪೋಷಕರ ಸಭೆಯನ್ನು ನಡೆಸಿ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಅವರೊಂದಿಗೆ ಚರ್ಚಿಸಬೇಕೆಂಧರು.

ತನ್ಮೂಲಕ ಫಲಿತಾಂಶಕ್ಕೆ ಹೆಚ್ಚು ಮಹತ್ವ ನೀಡಬೇಕು. ಎರಡನೆಯದಾಗಿ ಹೆಚ್ಚು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಸಿಕೊಳ್ಳಬೇಕು. ಇದರಲ್ಲಿ ಯಾವುದಾದರು ಒಂದು ಕೊರತೆಯಾದರೆ ನಿಮ್ಮ ಅಸ್ತಿತ್ವಕ್ಕೆ ತೊಂದರೆಯಾಗುತ್ತದೆ. ಪರಿಣಾಮಕಾರಿ ಬೋಧನೆ ನಿಮ್ಮದಾಗಬೇಕು. ಈ ವಿಧಾನದಿಂದ ವಿದ್ಯಾರ್ಥಿ ಭವಿಷ್ಯ ಉತ್ತಮವಾಗುತ್ತದೆ ಎಂದರು.