ಬೆಂಗಳೂರು: ಮಂಗಳವಾರ  ರಾಜರಾಜೇಶ್ವರಿ ನಗರ ಕ್ಷೇತ್ರದ ಜಾಲಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಸಾವಿರಾರು ವೋಟರ್‌ಐಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕ, ಕಾಂಗ್ರೆಸ್ ಅಭ್ಯರ್ಥಿ 11 ನೇ ಆರೋಪಿ ಯಾಗಿರುವ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಗುರುವಾರ ಎಫ್‌ಐಆರ್ ದಾಖಲಿಸಿದೆ ಎಂದು ಚನಾವಣಾ ಅಧಿಕಾರಿ ಮಂಜುನಾಥ್ ಹೇಳಿದ್ದಾರೆ.

ಮಂಗಳವಾರದ ನಡೆದ ದಾಳಿ ಯಲ್ಲಿ ಎಪಿಕ್ ಕಾರ್ಡ್ಗಳನ್ನು ನಕಲು ಮಾಡುವ 3 ಮುದ್ರಣ ಯಂತ್ರಗಳು, 5 ಲ್ಯಾಪ್ಟಾಪ್, 9 ಮೊಬೈಲ್ ಫೋನ್ ಜೊತೆಗೆ ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಿಸಿಟಿಂಗ್ ಕಾರ್ಡ್ ಸಿಕ್ಕಿದ್ದವು. ಬಿಬಿಎಂಪಿ ಮುದ್ರೆ ಹೊಂದಿರುವ 6,342 ಮತದಾರರ ಅರ್ಜಿ ಸ್ವೀಕೃತಿಗಳು, ಬಿಬಿಎಂಪಿ ಮುದ್ರೆ ಇಲ್ಲದ 20,700 ಸ್ವೀಕೃತಿ ಅರ್ಜಿಗಳು ಪತ್ತೆಯಾಗಿದ್ದವು. ಇದಲ್ಲದೇ ಕುಟುಂಬಗಳ ಸಂಖ್ಯೆ, ವ್ಯಕ್ತಿಗಳ ಹೆಸರು, ಜಾತಿ, ಮೊಬೈಲ್ ನಂಬರ್ ಮತ್ತಿತರ ವಿವರಗಳನ್ನು ಹೊಂದಿರುವ ಸರ್ವೆ ಫಾರಂಗಳು ಮತ್ತು ಸರ್ವೆ ಮಾಡಿದವರ ಹೆಸರುಗಳು ಸ್ಥಳದಲ್ಲಿ ಸಿಕ್ಕಿದ್ದವು. ಜೊತೆಯಲ್ಲಿ ಮುನಿರತ್ನ ಅವರ ಭಾವಚಿತ್ರವುಳ್ಳ ಕಾರ್ಡ್ ಪತ್ತೆಯಾಗಿತ್ತು.

ಪತ್ತೆಯಾಗಿರುವ ಎಲ್ಲ 9,896 ಎಪಿಕ್ ಕಾರ್ಡ್ಗಳು ಅಸಲಿಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.