ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ, ವಿವಿಧ ಪಕ್ಷಗಳಿಗೆ ಸೇರಿದ ಜಾತಿ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಎಲ್ಲಾ ಪಕ್ಷಗಳಿಗೂ ಬೆಂಬಲಿಸುವುದು ಸಾಮಾನ್ಯ. ಆದ್ರೆ ಹೋರಾಟಗಾರ ಜನಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡ, ಶಾಸಕ ಜಿಗ್ನೇಶ್ ಮೇವಾನಿ ಬಗ್ಗೆ ದುರ್ಗದ ಒಬ್ಬರು ಕಳುಹಿಸಿರುವ ಹಲವು ಪ್ರಶ್ನೆಗಳು……….!
-ಸಂ

ಚಿತ್ರದುರ್ಗ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದ ಪ್ರಗತಿಪರರು ಹಾಗೂ ಅನೇಕ ಜನಪರ ಸಂಘಟನೆಗಳು ಕೋಮುವಾದಿ ಬಿಜೆಪಿಯ ವಿರುದ್ಧ ಮೊದಲಿನಿಂದಲೂ ದನಿ ಎತ್ತುತ್ತಿದ್ದಾರೆ. ಅನೇಕ ಹೋರಾಟಗಳನ್ನು ನಡೆಸಿರುವ ಇವರುಗಳು ಬಿಜೆಪಿ ವಿರುದ್ಧ ಇರುವುದಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೂ ಸಹ ಕೋಮುವಾದದ ವಿರುದ್ಧ ಹೋರಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಆದರೆ ಒಂದೆರಡು ಗುಂಪುಗಳು ಹಾಗೂ ಒಂದಿಬ್ಬರು ವ್ಯಕ್ತಿಗಳು ಇವಾಗ ’ಸಂವಿಧಾನ ಉಳಿಸಿ ಕರ್ನಾಟಕ ಉಳಿಸಿ’ ಎನ್ನುತ್ತಾ ನಿಮ್ಮನ್ನು ಜೊತೆಗೆ ಸೇರಿಸಿಕೊಂಡಿದ್ದಾರೆ.
೧. ನೀವು ಬರಿ ಬಿಜೆಪಿಯನ್ನು ಮಾತ್ರ ಟೀಕಿಸುತ್ತಾ ಕಾಂಗ್ರೆಸ್‌ನವರ ಒಳಗೂ ಇರುವ ಕೋಮುವಾದದ ಬಗ್ಗೆ ಯಾಕೆ ಮಾತನಾಡುವುದಿಲ್ಲ?
೨. ಪರ್ಯಾಯ ರಾಜಕೀಯ ಮಾಡಬೇಕು ಎನ್ನುತ್ತಾ ನೀವುಗಳೆಲ್ಲಾ ಕಾಂಗ್ರೆಸ್ ಗುಲಾಮಗಿರಿ ಮಾಡುವಂತೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿಲ್ಲವೆ? ಪರ್ಯಾಯ ಅಂದರೆ ಇದೇನಾ ?
೩. ದೇವನೂರು ಮಹದೇವ, ನೂರ್ ಶ್ರೀಧರ್, ಎಸ್.ಆರ್. ಹಿರೇಮಠ ಮುಂತಾದವರು ಪರ್ಯಾಯ ರಾಜಕೀಯ ಮಾಡಬೇಕು ಎನ್ನುತ್ತಿದ್ದರು ಇಷ್ಟು ದಿನ. ಈಗ ನೋಡಿದರೆ ದೇವನೂರು ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಗಾಗಿ ಬಿಸಿಲಲ್ಲಿ ಸುತ್ತಿ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಇನ್ನೊಂದು ಗುಂಪು ನಿಮ್ಮನ್ನು ಬಳಸಿಕೊಂಡು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದೆ.
ಪರ್ಯಾಯ ರಾಜಕೀಯ ಅಂದರೆ ಏನು, ಸ್ವಲ್ಪ ವಿವರಿಸಿ
೪. ನೀವು ಗುಜರಾತಿನಲ್ಲಿ ಎಲೆಕ್ಷನ್‌ಗೆ ನಿಂತಾಗ ಕರ್ನಾಟಕದಿಂದ SDPI ಪಾರ್ಟಿಯವರು ಅಲ್ಲಿಗೆ ಹೋಗಿ ಪ್ರಚಾರ ಮಾಡಿ, ೫೦ ಸಾವಿರ ಹಣ ಕೂಟ್ಟು ನಿಮಗೆ ಬೆಂಬಲಿಸಿದ್ದರು. ಆದರೆ ಇವಾಗ ನೀವು ಮೈಸೂರಿನ ನರಸಿಂಹರಾಜ, ಬಂಟವಾಳ, ಬೆಂಗಳೂರಿನಲ್ಲಿ ನಿಂತಿರುವ SDPI ನವರಿಗೆ ಯಾಕೆ ಬೆಂಬಲ ಕೊಡುತ್ತಿಲ್ಲ.

೫. ಪರ್ಯಾಯ ಅಂದರೆ ಕಾಂಗ್ರೆಸ್‌ಗೆ ಜನರನ್ನು ಒತ್ತೆ ಇಡುವುದಾ?
೬. ಕಾಂಗ್ರೆಸ್ ಕಳೆದ ೫ ವರ್ಷದಲ್ಲಿ ಭಜರಂಗದಳ, RSS ಅನ್ನು ಕಂಟ್ರೋಲ್ ಮಾಡಲಿಲ್ಲ ಯಾಕೆ?
೭. ಹೋಗಲಿ ಕೋಮುವಾದದ ವಿರುದ್ಧ ಇನ್ನು ಮೇಲಾದರೂ ಹೋರಾಡುತ್ತೇವೆ ಅಂತಲಾದರೂ ನೀವು ಕಾಂಗ್ರೆಸ್‌ನಿಂದ ಮುಚ್ಚಳಿಕೆ ಬರೆಸಿಕೊಂಡು ಆ ನಂತರವಾದರು ಬೆಂಬಲ ಕೊಡಬೇಕಿತ್ತು. ಅದು ಬಿಟ್ಟು ಈ ತರ ಬೇಷರತ್ ಬೆಂಬಲ ಕಾಂಗ್ರೆಸ್‌ಗೆ ಕೊಟ್ಟರೆ ನಿಮ್ಮನ್ನು ಕಾಂಗ್ರೆಸ್ ದಲ್ಲಾಳಿ ಅನ್ನಬಾರದೇಕೆ

– ತಿಪ್ಪೇಸ್ವಾಮಿ, ಚಿತ್ರದುರ್ಗ