ಹೊಸದುರ್ಗ: ಮರಳು ಸಾಗಿಸಲು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಹೊಸದುರ್ಗ ಪೊಲೀಸ್ ಠಾಣೆಯ ಮುಂದೆ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಗೂಳಿಹಟ್ಟಿ ಶೇಖರ್, ಒಂದು ಹಂತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.

ಕೂಡಲೇ ಅವರ ಬೆಂಬಲಿಗರು ಈ ಪ್ರಯತ್ನವನ್ನು ತಡೆದರಾದರೂ ಪೆಟ್ರೋಲ್, ಗೂಳಿಹಟ್ಟಿ ಶೇಖರ್ ಅವರ ಕಿವಿ, ಮೂಗು, ಬಾಯೊಳಗೆ ಹೋದ ಪರಿಣಾಮ ಅಸ್ವಸ್ಥರಾದರು.

ಅವರನ್ನು ಕೂಡಲೇ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.