ವಿಶಾಖಪಟ್ಟಣಂ: ಪೊಲೀಸರ ಕಿರುಕುಳದಿಂದ ನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ನವೆಂಬರ್ ೩ ರಂದು ಕರ್ನೂಲ್‌ನ ಪನ್ಯಂ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿಗೆ ಹಾರಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ನವೆಂಬರ್ ೩ ರಂದು ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ಶೇಕ್ ಅಬ್ದುಲ್ ಸಲಾಮ್ (೪೫), ಪತ್ನಿ ನೂರ್ಜಾನ್ (೪೩) ಮಗ ದಾದಾ ಖಲಂದರ್ (೯) ಹಾಗೂ ಮಗಳು ಸಲ್ಮಾ (೧೪) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಪೊಲೀಸರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ

ಶೇಕ್ ಅವರು ಆಭರಣದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಭರಣ ಕಳ್ಳತನದ ಆರೋಪವನ್ನು ಹೊರಿಸಿ ಕೆಲಸದಿಂದ ತೆಗೆದು ಹಾಕಲಾಗಿತ್ತು.&ಟಿbsಠಿ;ಬಳಿಕ ಶೇಕ್ ಅಬ್ದುಲ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು. ಜಾಮೀನು ಪಡೆದುಕೊಂಡ ಬಳಿಕ ಪೊಲೀಸರು ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಶೇಕ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ.