ಭೂಪಾಲ್; ವಿಷಪೂರಿತ ಮದ್ಯ ಸೇವಿಸಿ 11 ಮಂದಿ ಮೃತಪಟ್ಟಿದ್ದು, 7  ಮಂದಿ ಅಸ್ವಸ್ಥರಾಗಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಮೊರೆನ ಜಿಲ್ಲೆಯಲ್ಲಿ ಇಂದು ನಡೆದಿದೆ. ಜಿಲ್ಲೆಯ ಎರಡು ಪ್ರತ್ಯೇಕ ತಾಲ್ಲೂಕುಗಳಲ್ಲಿ ಈ ಘಟನೆ ನಡೆದಿದ್ದು, ಪಹವಾಲಿ ಗ್ರಾಮ ಮೂವರು ಮತ್ತು ಮಾನ್ಪುರ ಗ್ರಾಮದ 7 ಮಂದಿ ಮದ್ಯ ಸೇವನೆಯಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮದ್ಯ ಸೇವಿಸಿದ 7ಕ್ಕೂ ಹೆಚ್ಚು ಮಂದಿ ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ನ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳೀಯವಾಗಿ ಮದ್ಯವನ್ನು ತಯಾರಿಸಲಾಗಿದ್ದು, ಇದನ್ನು ಕುಡಿದು ಜನರು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗ 10 ಮಂದಿ ಮಾರ್ಗಮಧ್ಯೆಯೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಒಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಎಸ್‌ಪಿ ಅನುರಾಜಗ್ ಸುಜಾನಿಯ ಮಾಹಿತಿಯನ್ನು ನೀಡಿದ್ದಾರೆ.

ಮೃತರ ಸಂಬ0ಧಿಕರು ಹಾಗೂ ಗ್ರಾಮಸ್ಥರು ಮೊರೆನಾ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದು, ಮೃತದೇಹಗಳನ್ನು ಆಂಬುಲೆನ್ಸ್ನಲ್ಲಿ ಇಡಲು ಅವಕಾಶ ಕೊಡದೆ ಟ್ರಾಕ್ಟರ್‌ನಲ್ಲಿ ಕೊಂಡೊಯ್ಯಲು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ರಾಜರೋಷವಾಗೇ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಅಬಕಾರಿ ಇಲಾಖೆಯ ಕೆಲವು ಅಧಿಕಾರಿಗಳ ಸಹಕಾರವಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇಂದು ೧೧ ಮಂದಿ ಮೃತಪಟ್ಟಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕ್ರಮ ಕೈಗೊಳ್ಳುವ ಪೊಲೀಸರು, ಅಧಿಕಾರಿಗಳು ಸಂಪೂರ್ಣವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬಾರದೇಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.