>ಹಾಸ್ಟೆಲ್ ಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಎಸ್ಸಿ, ಎಸ್ಟಿ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜೊತೆಗೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಹಾಗೂ ಕ್ಯಾಂಪಸ್ ನಲ್ಲಿ ಸೂಕ್ತ ರಕ್ಷಣೆ ಇಲ್ಲ ಹೀಗಾಗಿ ಹಾಸ್ಟೆಲ್ ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದೂ ಒತ್ತಾಯಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಮೌಲ್ಯ ಮಾಪನ ಕುಲಸಚಿವ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಅವರು ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಮತ್ತು ನಾಲ್ಕು ದಿನದ ಒಳಗಾಗಿ ಹಾಸ್ಟೆಲ್ ಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಾಗಿ ಭರವಸೆ ನೀಡಿದರು. ಈ ಮಾತಿಗೆ ಜಗ್ಗದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಈ ವೇಳೆ ಮಾತನಾಡಿದ ಬಹುಜನ ವಿದ್ಯಾರ್ಥಿ ಸಂಘದ ನಾಯಕ ಸದಾಶಿವ ಕಾಂಬಳೆ, ಸಮಾಜ ಕಲ್ಯಾಣ ಇಲಾಖೆಯಿಂದ ಬರುವ ಶಿಷ್ಯ ವೇತನ ಯಾವ ವಿದ್ಯಾರ್ಥಿಗೂ ಸಿಕ್ಕಿಲ್ಲ. ನವೆಂಬರ್ ತಿಂಗಳ ಒಳಗಾಗಿ ಎಲ್ಲ ಎಸ್ಸಿ, ಎಸ್ಟಿ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹೇಳಿದ್ದರು. ಆದರೆ, ನಮಗೆ ಯಾರಿಗೂ ಇದುವರೆಗೆ ಲ್ಯಾಪ್ ಟಾಪ್ ಸಿಕ್ಕಿಲ್ಲ ಎಂದು ಆರೋಪಿಸಿದರು