ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗಳು28 ಲಕ್ಷದವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವೀಡಿಯೋ ಸರ್ವಲೆನ್ಸ್ ಟೀಮ್, ವೀಡಿಯೋ ವೀಕ್ಷಣಾ ವಿವಿಟಿ ತಂಡ, ಎಂ.ಸಿ.ಎಂ.ಸಿ ತಂಡ ಹಾಗೂ ಚುನಾವಣಾ ವೆಚ್ಚ ನಿಯಂತ್ರಣ ತಂಡಗಳಿಗೆ ಏರ್ಪಡಿಸಲಾದ ತರಬೇತಿಯಲ್ಲಿ ಮಾತನಾಡಿದರು.

ಚುನಾವಣಾ ವೆಚ್ಚದ ದರಗಳ ಬಗ್ಗೆ ಚುನಾವಣೆ ವೇಳಾಪಟ್ಟಿ ನಂತರ ಅಂತಿಮಗೊಳಿಸಲಾಗುತ್ತಿದ್ದು ಅದರಂತೆ ಪ್ರತಿ ಅಭ್ಯರ್ಥಿಗಳ ವೆಚ್ಚವನ್ನು ಪರಿಗಣಿಸಬೇಕಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿಗಳ ಪ್ರಚಾರದ ವೇಳೆ ಹೆಚ್ಚಿನ ನಿಗಾವಹಿಸಬೇಕು. ಪ್ರತಿ ತಂಡವು ಆಯಾ ದಿನದ ವಿವರವನ್ನು ಚುನಾವಣಾಧಿಕಾರಿಗಳಿಗೆ ನೀಡಬೇಕು. ಚುನಾವಣೆಗೆ ಸಂಬಂಧಿಸಿದಂತೆ ವೆಚ್ಚದ ಬಗ್ಗೆ ನಿಗಾವಹಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೆಚ್ಚ ವೀಕ್ಷಣಾ ತಂಡ ಹಾಗೂ ಜಿಲ್ಲಾ ಮಟ್ಟದಲ್ಲಿ ವೆಚ್ಚ ವೀಕ್ಷಣಾ ತಂಡದ ಜೊತೆಗೆ ಪ್ರತಿ ಕ್ಷೇತ್ರದಲ್ಲಿ ವೆಚ್ಚ ವೀಕ್ಷಕರಿರುತ್ತಾರೆ.

ಚುನಾವಣೆಗೆ ಸಂಬಂಧಿಸಿಂತೆ ರ್‍ಯಾಲಿಗಳನ್ನು ಏರ್ಪಡಿಸಿದ ವೇಳೆ ಆರಂಭಕ್ಕೂ ಮುಂಚಿತವಾಗಿ ವೀಡಿಯೋ ಸರ್ವೆಲೆನ್ಸ್ ತಂಡವು ಭೇಟಿ ನೀಡಿ ಎಲ್ಲವನ್ನು ವೀಡಿಯೋ ಮಾಡಬೇಕು. ಇದನ್ನು ವೀಡಿಯೋ ವೀಕ್ಷಣಾ ತಂಡ ಪರಿಶೀಲಿಸಿ ವೆಚ್ಚದ ತಂಡಕ್ಕೆ ವಿವರವನ್ನು ನೀಡಲಿದೆ. ಈಗಾಗಲೇ ನಿಯೋಜಿಸಿರುವ ತಂಡದ ಅಧಿಕಾರಿಗಳನ್ನು ಹೊರತುಪಡಿಸಿ ಬದಲಿ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಿದರು.

ಎಂ.ಸಿ.ಎಂ.ಸಿ. ತಂಡವು ಜಾಹಿರಾತು, ಕಾಸಿಗಾಗಿ ಸುದ್ದಿಗೆ ಸಂಬಂಧಿಸಿದಂತೆ ಪರಿಶೀಲಿಸಲಿದ್ದು ಈ ತಂಡವು ಮಾರ್ಗಸೂಚಿಯನ್ವಯ ಕೆಲಸ ನಿರ್ವಹಿಸಲಿದೆ. ಸುದ್ದಿರೂಪದಲ್ಲಿ ಜಾಹಿರಾತು ಪ್ರಕಟಿಸಿದಲ್ಲಿ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿ ಆಯಾ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಲು ಸಮಿತಿ ಅನುಬಂಧದಂತೆ ವರದಿ ನೀಡಲಿದೆ ಮತ್ತು ಪ್ರಕರಣವನ್ನು ದಾಖಲಿಸಲಿದೆ.
ಪ್ರತಿ ತಂಡಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸಲಿದ್ದು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಚುನಾವಣಾಧಿಕಾರಿಗಳು, ಸಹಾಯಕ ಚುನಾವಾಣಾಧಿಕಾರಿಗಳು ಉಪಸ್ಥಿತರಿದ್ದರು