ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ಚುನಾವಣಾ ವೆಚ್ಚವಾಗಿ ೨೮ ಲಕ್ಷದವರೆಗೆ ವೆಚ್ಚ ಮಾಡಲು ಅವಕಾಶ ಇದ್ದು ಚುನಾವಣೆಯಲ್ಲಿ ಖರ್ಚು ಮಾಡಬಹುದಾದ ಎಲ್ಲಾ ವಸ್ತುಗಳ ದರಗಳನ್ನು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಕಣದಲ್ಲಿನ ಪ್ರತಿ ಅಭ್ಯರ್ಥಿಗಳಿಗೆ ೨೮ ಲಕ್ಷದವರೆಗೆ ವೆಚ್ಚ ಮಾಡಲು ನಿಯಮದನ್ವಯ ಅವಕಾಶ ಇದೆ. ಇದರ ಮಿತಿ ದಾಟಿದಲ್ಲಿ ಅಭ್ಯರ್ಥಿ ಆಯ್ಕೆಯಾದರೂ ಸಹ ಅನರ್ಹರಾಗುವರು. ರ್‍ಯಾಲಿಯ ವೇಳೆ ಉಪಯೋಗಿಸುವ ಪೆಂಡಾಲ್, ಖುರ್ಚಿ, ಶಾಮಿಯಾನ, ಜನರೇಟರಿ, ಪ್ಲೆಕ್ಸ್, ಕರಪತ್ರಗಳು, ಮೈಕ್ ಸೇರಿದಂತೆ ಉಪಯೋಗಿಸುವ ಪ್ರತಿಯೊಂದಕ್ಕೂ ಲೆಕ್ಕವನ್ನು ನೀಡಬೇಕಾಗುತ್ತದೆ. ಮತ್ತು ಅಭ್ಯರ್ಥಿಗೆ ಅವರ ಸ್ವಂತ ವಾಹನವಾದರೊ ಒಂದಕ್ಕೆ ಮಾತ್ರ ಇದಕ್ಕೆ ತಗಲುವ ಇಂಧನ, ವಾಹನ ಚಾಲಕರ ಭತ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಆದರೆ ಅವರ ಸ್ವಂತ ವಾಹನಗಳು ಒಂದಕ್ಕಿಂತ ಹೆಚ್ಚು ಇದ್ದು ಇವುಗಳನ್ನು ಉಪಯೋಗಿಸಿದಲ್ಲಿ, ಇವುಗಳಿಗೆ ಬಾಡಿಗೆಯಾಗಿ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಹಾಗೂ ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಕೇಬಲ್ ಟಿ.ವಿ.ಗಳಲ್ಲಿ ನೀಡುವ ಜಾಹಿರಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ವಿದ್ಯುನ್ಮಾನ ಮಧ್ಯಮಗಳಲ್ಲಿ ಜಾಹಿರಾತು ನೀಡಲು ಪೂರ್ವ ಪ್ರಾಮಾಣೀಕರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ.

ಹಾಗೂ ಮುದ್ರಣ ಮಾಧ್ಯಮಗಳಲ್ಲಿ ನೀಡಲಾಗುವ ಜಾಹಿರಾತುಗಳು ಸೇರಿದಂತೆ ಇತರೆ ಎಲ್ಲಾ ವೆಚ್ಚಗಳನ್ನು ಸಹ ಅವರ ವೆಚ್ಚವಾಗಿ ಪರಿಗಣಿಸಲಾಗುತ್ತದೆ. ಆದರೆ ಕಾನೂನಾತ್ಮಕ ವೆಚ್ಚಗಳಿಗೆ ಮಾತ್ರ ಅವಕಾಶ ಇದ್ದು ಕಾನೂನು ಬಾಹಿರ ವೆಚ್ಚಗಳಿಗೆ ಅವಕಾಶಗಳಿರುವುದಿಲ್ಲ. ಅಭ್ಯರ್ಥಿಗಳು ಚುನಾವಣಾ ಲೆಕ್ಕವನ್ನು ಕರಾರುವಕ್ಕಾಗಿ ನಿಗದಿತ ಅವಧಿಯಲ್ಲಿ ನೀಡಬೇಕಾಗುತ್ತದೆ. ಫಲಿತಾಂಶ ಬಂದು ೩೦ ದಿನಗಳೊಳಗಾಗಿ ಅಂತಿಮ ಖರ್ಚಿನ ವಿವರವನ್ನು ನೀಡಬೇಕಾಗುತ್ತದೆ.

ಎಲ್ಲಾ ರಾಜಕೀಯ ಪಕ್ಷದವರು ಚುನಾವಣಾ ಆಯೋಗದ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು. ವಿವಿಧ ರ್‍ಯಾಲಿಗಳಿಗೆ ಅನುಮತಿಗಾಗಿ ನಿಗದಿತ ನಮೂನೆಯಲ್ಲಿ ಮಾತ್ರ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಉಪಯೋಗಿಸುವ ಪ್ರತಿ ವಸ್ತುಗಳ ವಿವರ, ದರದ ವಿವರವನ್ನು ನೀಡಬೇಕಾಗುತ್ತದೆ. ವೆಚ್ಚದ ದರಗಳ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಕ್ರೂಢೀಕೃತ ಪುಸ್ತಕ ಒದಗಿಸಿದ್ದು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿಯು ವಿವರಗಳು ಲಭ್ಯವಿರುತ್ತದೆ ಎಂದರು.
ಈ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರವನ್ನು ಹಿಂದಿನ ಚುನಾವಣೆಯಲ್ಲಿನ ಅಂಕಿಅಂಶಗಳನ್ನು ಆಧರಿಸಿ ಚುನಾವಣಾ ವೆಚ್ಚದ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಲಾಗಿದೆ. ಇಲ್ಲಿ ಹೆಚ್ಚುವರಿಯಾಗಿ ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ. ಬೇರೆ ಕ್ಷೇತ್ರಗಳಿಗೆ ಸಹಾಯಕ ವೆಚ್ಚ ವೀಕ್ಷಕರು ಒಬ್ಬರಿದ್ದರೆ, ಇಲ್ಲಿಗೆ ಇಬ್ಬರು ಇರುತ್ತಾರೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಸಂಗಪ್ಪ, ಉಪವಿಭಾಗಾಧಿಕಾರಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ವಿಜಯಕುಮಾರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.