ಬೆಂಗಳೂರು: ”ಕೊರೋನಾದಿಂದಾಗಿ ಜನ ಸಾಮಾನ್ಯರ ಬದುಕು ದಯನೀಯ ಸ್ಥಿತಿಯಲ್ಲಿದ್ದು, ಈ ಸಮಯದಲ್ಲಿ ವಿದ್ಯುತ್ ದರ ಹೆಚ್ಚಿಸುವ ಸರ್ಕಾರದ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ”ಕೊರೋನಾ ಪಿಡುಗಿನಿಂದ ದೇಶ ತತ್ತರಿಸಿದೆ. ಈ ಸಮಯದಲ್ಲಿ ಎಲ್ಲರೂ ಮಾನವೀಯತೆಗೆ ಗೌರವ ತೋರಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇವೆ. ಈ ಸಮಸ್ಯೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಉದ್ಯಮ ನಡೆಸುತ್ತಿರುವವರಿಂದ ಸಣ್ಣ ವ್ಯಾಪಾರಿಗಳವರೆಗೂ, ಉದ್ಯೋಗದಾತರಿಂದ ಉದ್ಯೋಗಿಗಳವರೆಗೂ, ಪ್ರತಿ ವರ್ಗದ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಜನ ಕೆಲಸ ಇಲ್ಲದೆ, ಆದಾಯ ಇಲ್ಲದೆ ಕಂಗಾಲಾಗಿದ್ದಾರೆ. ಜನರ ನೆರವಿಗಾಗಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಯಾರಿಗೆ ಸಹಾಯವಾಗಿದೆ ಎಂದು ಕೇಳಿದ್ದೆವು. ಆದರೆ ಸರ್ಕಾರ ಇದನ್ನು ತಿಳಿಸಲಿಲ್ಲ. ಈ ಸಮಯದಲ್ಲಿ ಪಾಲಿಕೆ, ಪಂಚಾಯ್ತಿ ಮಟ್ಟದಲ್ಲಿ ಒಂದು ವರ್ಷ ಆಸ್ತಿ ತೆರಿಗೆ ರದ್ದು ಮಾಡಿ ಎಂದು ಕೇಳಿದೆವು. ಇದಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಈ ಮಧ್ಯೆ ಎಲ್ಲ ವಹಿವಾಟಿಗೂ ಸರ್ಕಾರ ನಿರ್ಬಂಧ ಹೇರಿತ್ತು. ಎಲ್ಲರೂ ಇದಕ್ಕೆ ಸಹಕಾರ ನೀಡಿದ್ದರು” ಎಂದರು.