ಚಿತ್ರದುರ್ಗ : ಎಸ್.ಜೆ.ಎಂ. ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಆಂಗ್ಲಮಾಧ್ಯಮ ಪ್ರೌಢಶಾಲೆಗಳ ಫಲಿತಾಂಶ ಅವಲೋಕನ ಸಭೆಯು ಡಾ. ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿಕೊಳ್ಳಬೇಕು. ದಾಖಲಾತಿ ಹೆಚ್ಚಳಕ್ಕೆ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ಪಾಠ ಬೋಧನೆ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಿದ್ದಲ್ಲಿ ಅದು ಶಿಕ್ಷಕರ ಶಕ್ತಿಯನ್ನು, ಶಿಕ್ಷಕರು ಉತ್ತಮ ಪಾಠ ಬೋಧನೆ ಮಾಡಿದಲ್ಲಿ ಸಂಸ್ಥೆಯ ಶಕ್ತಿಯು ಹೆಚ್ಚಾಗಲಿದೆ ಎಂದು ತಿಳಿಸಿದರು.
ಮುಂದುವರೆದು, ಶಿಕ್ಷಕರು ಅಧ್ಯಯನಶೀಲರಾಗಬೇಕಿದ್ದು, ಪಾಠ ಬೋಧನೆಯಲ್ಲಿ ನವೀನ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಕಠಿಣ ವಿಷಯಗಳನ್ನು ಅತೀ ಸರಳ ರೀತಿಯಲ್ಲಿ ಬೋಧಿಸುವಂತಾಗಬೇಕು. ಉತ್ತಮ ಶಿಕ್ಷಕರಾಗಲು ಭಾಷಾ ಪ್ರಬುದ್ಧತೆ, ಉತ್ತಮ ಸಂವಹನ ಕೌಶಲ್ಯಗಳು, ವಿಷಯಗ್ರಹಿಕೆಗಳಲ್ಲಿ ವೃತ್ತಿಪರತೆ ಹೊಂದಿರಬೇಕು. ಮೂಲಭೂತವಾಗಿ ಶಿಕ್ಷಕರಾದವರು ಸಕಾರಾತ್ಮಕ ಮನೋಭಾವನೆ ಹೊಂದಿ ವಿದ್ಯಾರ್ಥಿಗಳಲ್ಲಿ ಭರವಸೆ ಮೂಡುವಂತೆ ಕಾರ್ಯನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ೨೩ ಶಿಕ್ಷಕರುಗಳನ್ನು ಮತ್ತು ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ಮುಖ್ಯಶಿಕ್ಷಕರುಗಳಾದ ಶ್ರೀಮತಿ ಪುಷ್ಪವಲ್ಲಿ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ, ಚಿತ್ರದುರ್ಗ, ಶ್ರೀಮತಿ ಗಾಯತ್ರಿ, ಎಸ್.ಜೆ.ಎಂ. ಸಿಬಿಎಸ್‌ಇ ವಸತಿಯುತ ಪ್ರೌಢಶಾಲೆ, ಚಿತ್ರದುರ್ಗ, ರೇವಣ್ಣ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಪ್ರೌಢಶಾಲೆ, ರಾಮಗಿರಿ ಇವರನ್ನು ಶ್ರೀಗಳು ಗೌರವಿಸಿದರು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಉಪಸ್ಥಿತರಿದ್ದರು.