ಚಿತ್ರದುರ್ಗ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಎ.ಐ.ಡಿ.ವೈ.ಓ., ಎ.ಐ.ಡಿ.ಎಸ್.ಓ., ಎ.ಐ.ಎಂ.ಎಸ್.ಎಸ್.ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಈಗಾಗಲೇ ಆರಂಭಗೊಂಡಿದ್ದು, ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬಸ್ ಪಾಸ್‍ಗಳ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿತ್ತು. ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್‍ನ ಎಲ್ಲಾ ಶಾಸಕರು ಬೆಂಬಲ ಸೂಚಿಸಿದ್ದರು. ಆದರೆ ಸರ್ಕಾರಿ ಆದೇಶ ಜಾರಿಯಾಗದ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳು ಜಾರಿಗೊಳಿಸುವಲ್ಲಿ ಗೊಂದಲಕ್ಕೀಡಾಗಿದ್ದಾರೆ. ಉಚಿತ ಬಸ್ ಪಾಸ್ ಇಲ್ಲದೆ ನೂರಾರು ರೂ.ಗಳನ್ನು ತೆತ್ತು ವಿದ್ಯಾರ್ಥಿಗಳು ಬಸ್‍ಗಳಲ್ಲಿ ಪ್ರಯಾಣಿಸುವಂತಾಗಿದೆ. ರಾಜ್ಯದಲ್ಲಿ ಈಗಿರುವ ಸಮ್ಮಿಶ್ರ ಸರ್ಕಾರ ಕೂಡಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್‍ಗಳನ್ನು ನೀಡಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಎ.ಐ.ಡಿ.ವೈ.ಓ. ಅಧ್ಯಕ್ಷ ರವಿಕುಮಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಹಾಗೂ ಶಿಕ್ಷಣಕ್ಕೆ ಹಲವಾರು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಡಾಫೆ ಉತ್ತರ ನೀಡುತ್ತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿವೆ. ಉಚಿತ ಬಸ್ ಪಾಸ್‍ಗೆ ಆದೇಶ ನೀಡುವತನಕ ಹಿಂದಿನ ವರ್ಷದ ಬಸ್‍ಪಾಸ್‍ಗಳನ್ನೆ ಉಪಯೋಗಿಸುವಂತೆ ನಿರ್ದೇಶನ ನೀಡಲಿ. ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 12 ತಿಂಗಳು ಬಸ್‍ಪಾಸ್ ನೀಡಬೇಕು. ಈಗಾಗಲೇ ವಸೂಲಿ ಮಾಡಿರುವ ಶುಲ್ಕವನ್ನು ಹಿಂದಿರುಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಎ.ಐ.ಡಿ.ವೈ.ಓ.ಕಾರ್ಯದರ್ಶಿ ವಿನಯ್, ಎ.ಐ.ಡಿ.ಎಸ್.ಓ. ಕಾರ್ಯದರ್ಶಿ ಪ್ರದೀಪ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು